ಜಿಲ್ಲೆ

ಬಸವಸಾಗರ ಜಲಾಶಯಕ್ಕೆ ಬಿಗಿ ಭದ್ರತೆ

ಕೊಡೇಕಲ್: ಪಾಕಿಸ್ತಾನದಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಬುಧವಾರ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕರ‍್ಯಾಚರಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹುಣಸಗಿ ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ರಾಜ್ಯದ ಮೂರನೇ ಅತಿ ದೊಡ್ಡ ಬಸವಸಾಗರ ಜಲಾಶಯ ೪೯೨.೨೫೨ ಮೀ ಅಡಿ ಹೊಂದಿದ್ದು ೩೩.೩೧೩ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಯಾದಗಿರಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳ ಪ್ರದೇಶದಲ್ಲಿ ಬರುವ ಕಾರಣ ಮೂರು ಜಿಲ್ಲೆಗಳ ಜಿಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಜಲಾಶಯದ ಭದ್ರತೆ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಈಗಾಗಲೇ ದಿನದ ೨೪ ಗಂಟೆಗಳ ಲಿಂಗಸೂರಿನ ಶರಣಬಸವೇಶ್ವರ ಭದ್ರತಾ ಸಿಬ್ಬಂದಿ ಜಲಾಶಯಕ್ಕೆ ಭದ್ರತೆಯನ್ನು ಒದಗಿಸುತ್ತಿದ್ದಾರೆ. ಆದರೆ ಬುಧವಾರ ಭಾರತೀಯ ಸೇನೆ ಪಾಕ್‌ನ ವಿವಿಧೆಡೆ ಇರುವ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಧ್ವಂಸಗೊಳಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಪಿಎಸ್‌ಐ ನೇತೃತ್ವದಲ್ಲಿ ೫ ಜನ ಪೊಲೀಸ್ ಸಿಬ್ಬಂದಿ ಯಾದಗಿರಿ, ವಿಜಯಪುರ ಮತ್ತು ರಾಯಚೂರು ಪೊಲೀಸರು ಜಲಾಶಯದ ಪ್ರವೇಶ ದ್ವಾರ ಹಾಗೂ ಜಲಾಶಯದ ಮೇಲ್ಭಾಗದಲ್ಲಿ ಭದ್ರತೆ ಒದಗಿಸಲಾಗಿದೆ.

ಜಲಾಶಯದೊಳಗೆ ಪ್ರವೇಶ ನಿಷೇಧಿಸಲಾಗಿದೆ. ಮುಖ್ಯವಾಗಿ ಜಲಾಶಯದ ಮೇಲ್ಬಾಗದಲ್ಲಿ ನಿಗಮದ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಯಾರನ್ನು ಬಿಡುತ್ತಿಲ್ಲ. ಅಲ್ಲದೆ ಜಲಾಶಯ ಮುಂಭಾಗದಲ್ಲಿ ಸಂಚಾರ ಮಾಡುವ ವಾಹನಳ ಮೇಲು ಹದ್ದಿನಕಣ್ಣು ಇರಿಸಲಾಗಿದೆ.

ಜಲಾಶಯಕ್ಕೆ ತೆರಳುವ ನಾರಾಯಣಪುರ ಹೊರವಲಯದ ಚೆಕ್‌ಪೋಸ್ಟ್ ಬಳಿ ಕೂಡ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅತ್ತ ರಾಯಚೂರು ಜಿಲ್ಲೆ ಮತ್ತು ವಿಜಯಪುರ ಜಿಲ್ಲೆ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಆಯಾ ಜಿಲ್ಲೆಗಳ ಪೊಲೀಸರು ಬಂದೋಬಸ್ತ್ ಒದಗಿಸಿದ್ದಾರೆ. ಒಟ್ಟಾರೆ ಜಲಾಶಯದ ಭದ್ರತೆಯ ದೃಷ್ಟಿಯಿಂದ ಮೂರು ಜಿಲ್ಲೆಗಳ ಪೊಲೀಸ್ ವರಿಷ್ಟಾಧಿಕಾರಿಗಳ ಆದೇಶದಂತೆ ಜಲಾಶಯಕ್ಕೆ ಬಿಗಿ ಭದ್ರತೆ ನೀಡಲಾಗಿದೆ.