ಕೊಡೇಕಲ್ (ಯಾದಗಿರಿ): ಶುಕ್ರವಾರ ೨೦ ಸಾವಿರ ಕ್ಯೂಸೆಕ್‌ನಿಂದ ಶುರುವಾದ ಒಳಹರಿವು ಕ್ರಮೇಣ ಹೆಚ್ಚುತ್ತಿದ್ದು, ಶನಿವಾರ ಮಧ್ಯಾಹ್ನ ೪೫ ಸಾವಿರ ಕ್ಯೂಸೆಕ್ ಒಳಹರಿವಿನಿಂದಾಗಿ ನಾರಾಯಣಪುರದ ಬಸವಸಾಗರ ಜಲಾಶಯ ಶೇ ೮೫.೪೧ ಭರ್ತಿಯಾಗಿದೆ. ಸಂಗ್ರಹ ಮಟ್ಟ ಕಾಯ್ದುಕೊಂಡು ೧೪ ಮುಖ್ಯ ಕ್ರಸ್ಟ್ ಗೇಟ್‌ಗಳಿಂದ ೪೬,೭೦೪ ಕ್ಯೂಸೆಕ್ ಹಾಗೂ ಎಂಪಿಸಿಎಲ್ ವಿದ್ಯುತ್ ಸ್ಥಾವರ ಮೂಲಕ ೬೦೦೦ ಸೇರಿ ೫೨,೭೦೪ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.
ಕೆಲ ದಿನಗಳಿಂದ ಜಲಾಶಯ ಹಿನ್ನೀರ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನೀರಿಲ್ಲದೆ ಬಣಗಲಾರಂಭಿಸಿದ್ದ ಬಸವಸಾಗರಕ್ಕೆ ಒಳಹರಿವು ಆರಂಭವಾಗಿದ್ದು, ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತ್ರೀ ಅಣೆಕಟ್ಟೆಗೂ ಅಪಾರ ಪ್ರಮಾಣದ ನೀರು ಬರುತ್ತಿರುವ ಕಾರಣ ಎರಡೂ ಜಲಾಶಯಗಳು ಭರ್ತಿಯತ್ತ ಸಾಗಿವೆ. ಒಳಹರಿವಿನ ಲೆಕ್ಕಾಚಾರದೊಂದಿಗೆ ಸಂಗ್ರಹ ಮಟ್ಟ ಕಾಯ್ದುಕೊಳ್ಳಲು ಆಲಮಟ್ಟಿಯಿಂದ ಕೃಷ್ಣೆ ಒಡಲಿಗೆ ನೀರು ಹರಿಬಿಡಲಾಗುತ್ತಿದೆ.
೩೩.೩೧೩ ಟಿಎಂಸಿ ಸಾಮರ್ಥ್ಯದ ಬಸವಸಾಗರದಲ್ಲಿ ಸದ್ಯ ೨೮.೪೫ ಟಿಎಂಸಿ ನೀರಿದೆ. ಹೀಗಾಗಿ ಸಂಗ್ರಹ ಮಟ್ಟ ಕಾಯ್ದುಕೊಂಡು ಶುಕ್ರವಾರ ಮುಖ್ಯ ಕ್ರಸ್ಟ್ ಗೇಟ್ ಜತೆಗೆ ಎಡದಂಡೆ ಮುಖ್ಯ ಕಾಲುವೆ ಗೇಟ್‌ಗೂ ಪೂಜೆ ಸಲ್ಲಿಸಿ ಹಂತಹಂತವಾಗಿ ನದಿಗೆ ನೀರು ಹರಿಸುತ್ತಿದ್ದು, ಅಚ್ಚುಕಟ್ಟು ಪ್ರದೇಶದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಒಟ್ಟಾರೆ ಬರಿದಾಗಿದ್ದ ಬಸವಸಾಗರ ಮಡಿಲಿಗೆ ಕೃಷ್ಣೆ ಬಂದು ಸೇರುವ ಮೂಲಕ ಜಲಾಶಯ ತುಂಬಿ ತುಳುಕುವಂತಾಗಿದೆ. ಅಪಾರ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಕೃಷ್ಣೆ ತುಂಬಿ ಹರಿಯುತ್ತಿದ್ದು, ಜಲಾಶಯ ಕೆಳಭಾಗದ ಶ್ರೀ ಛಾಯಾ ಭಗವತಿ ದೇವಸ್ಥಾನ ಬಳಿ ಭೋರ್ಗರೆಯುತ್ತಿದ್ದಾಳೆ. ಕ್ರಸ್ಟ್ ಗೇಟ್‌ಗಳನ್ನು ತೆರೆದ ಬಳಿಕ ಜಲಾಶಯಕ್ಕೆ ಜೀವಕಳೆ ಬಂದಿದ್ದು, ನಯನ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಬರಲಾರಂಭಿಸಿದ್ದಾರೆ.
ನದಿ ತೀರದ ಗ್ರಾಮಸ್ಥರಿಗೆ ಎಚ್ಚರಿಕೆ: ಭರ್ತಿಯಾಗುತ್ತ ಸಾಗಿರುವ ಬಸವಸಾಗರಕ್ಕೆ ಒಳಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಯಾವುದೇ ಸಮಯದಲ್ಲಿ ಕೃಷ್ಣಾ ನದಿಗೆ ನೀರು ಹರಿಸಬಹುದಾಗಿದೆ. ಹೀಗಾಗಿ ನದಿ ತೀರದ ಗ್ರಾಮಸ್ಥರು ತಮ್ಮ ಸರಕು ಸಾಮಗ್ರಿ ಮತ್ತು ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದಲ್ಲದೆ ಗ್ರಾಮ ಪಂಚಾಯಿತಿಯಿಂದ ಡಂಗೂರ ಸಹ ಸಾರಲಾಗುತ್ತಿದೆ.