ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ನಗರದ ಬಸವಶ್ರೀ ಆರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ 2024-25ರ ಆರ್ಥಿಕ ವರ್ಷದಲ್ಲಿ 1,04,10,013 ಲಾಭ ಗಳಿಸಿದೆ. ಇದು ಹಿಂದಿನ ಸಾಲಿಗಿಂತ ಶೇ. 48 ರಷ್ಟು ಅಧಿಕವಾಗಿದೆ ಎಂದು ಸೊಸೈಟಿ ಅಧ್ಯಕ್ಷ ಎಸ್.ವಿ. ಅಂಗಡಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023-24ರಲ್ಲಿ ಸೊಸೈಟಿ 70.33 ಲಕ್ಷ ರೂ. ಲಾಭಗಳಿಸಿತ್ತು. ಸೊಸೈಟಿ ಅಸ್ತಿತ್ವಕ್ಕೆ ಬಂದು 6 ವರ್ಷಗಳಲ್ಲಿಯೇ ಲಾಭ ಗಳಿಕೆ 1 ಕೋಟಿ ರೂ. ಗಡಿ ದಾಟಿದ್ದು ಗಮನಾರ್ಹ ಸಾಧನೆಯಾಗಿದೆ. ಸಹಕಾರ ಸಂಘವೊಂದು ಕಡಿಮೆ ಅವಧಿಯಲ್ಲಿ ಇಷ್ಟೊಂದು ಬೆಳವಣಿಗೆ ಸಾಧಿಸಿರುವ ಬಗ್ಗೆ ಸಹಕಾರ ಸಂಘಗಳ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಸೊಸೈಟಿಯು 2625 ಸದಸ್ಯರನ್ನು ಹೊಂದಿದ್ದು, 110.10 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿದೆ. 2.35 ಕೋಟಿ ಶೇರು ಬಂಡವಾಳ, 15.71 ಕೋಟಿ ರೂ. ಠೇವಣಿ, 24.30 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. 18.81 ಕೋಟಿ ರೂ. ಸಾಲ ವಿತರಣೆ ಮಾಡಿದ್ದೇವೆ ಎಂದು ತಿಳಿಸಿದರು.
9.51 ಲಕ್ಷ ರೂ. ಶೇರು ಬಂಡವಾಳದಿಂದ ಆರಂಭಗೊಂಡ ಸೊಸೈಟಿಯು ಇಂದು 2.35 ಕೋಟಿ ರೂ. ಶೇರು ಬಂಡವಾಳ ಹೊಂದಿದೆ. ಪ್ರತಿ ವರ್ಷ ಲಾಭ ಗಳಿಕೆ ಹೆಚ್ಚುತ್ತ ಇದ್ದು ಸದಸ್ಯರಿಗೆ ಶೇ. 13ರಷ್ಟು ಡಿವಿಡೆಂಟ್ ನೀಡುತ್ತಿದ್ದೇವೆ. ಲೆಕ್ಕ ಪರಿಶೋಧನೆಯಲ್ಲಿ ಎ ಗ್ರೇಡ್ ಪಡೆದಿರುತ್ತೇವೆ. ನವನಗರ, ಅಕ್ಕಿಹೊಂಡ, ಕಲಘಟಗಿ ತಾಲೂಕಿನ ಜೋಡಳ್ಳಿಯಲ್ಲಿ ಶಾಖೆಗಳನ್ನು ತೆರೆದಿದ್ದೇವೆ. ಮುಂದಿನ ದಿನಗಳಲ್ಲಿ ಧಾರವಾಡದಲ್ಲಿ ಶಾಖೆ ತೆರೆಯುವ ಉದ್ದೇಶವಿದೆ ಎಂದರು.