ಜಿಲ್ಲೆ

ಬಸವಳಿದ ಜನರ ಬಗ್ಗೆ ಕನಿಕರ ತೋರಿಲ್ಲ : ಬಜೆಟ್ ಬಗ್ಗೆ ಮಾಜಿ ಸಿಎಂ ಎಚ್‌ಡಿಕೆ ಪ್ರತಿಕ್ರಿಯೆ

ಚನ್ನಪಟ್ಟಣ: ಕೇಂದ್ರ ಬಜೆಟ್ ಹಸಿದವರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮನೆಯಲ್ಲಿ ಮಲಗಿ ಎನ್ನುವಂತಿದೆ. ಈ ಬಟ್ಟೆಯನ್ನೂ ಸಹ ಪೂರ್ಣವಾಗಿ ಕೊಟ್ಟಿಲ್ಲ ಎಂದು ಕೇಂದ್ರ ಬಜೆಟ್ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವ್ಯಾಖ್ಯಾನಿಸಿದರು.

ನಗರದ ಅಂಬೇಡ್ಕರ್ ಭವನವನ್ನು ಮಂಗಳವಾರ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯರ ಪಾಲಿಗೆ ಭರವಸೆಯ ಆಶಾಕಿರಣವಾಗಬೇಕಿದ್ದ ಬಜೆಟ್‌ನಲ್ಲಿ ಅಂತಹ ಅಂಶ ಇಲ್ಲ. ಆರ್ಥಿಕವಾಗಿ ಬಳಲಿರುವ ಜನತೆಗೆ ತಣ್ಣೀರು ಬಟ್ಟೆಯೇ ಗತಿ ಎಂದು ಟೀಕಿಸಿದರು.

ಕೋವಿಡ್, ಬೆಲೆ ಏರಿಕೆಯಿಂದ ಬಸವಳಿದ ಜನರ ಬಗ್ಗೆ ಕನಿಷ್ಠ ಕನಿಕರ ತೋರಿಲ್ಲ. ಕರೊನಾ ಸಂಕಷ್ಟದ ನಂತರ ದೇಶದಲ್ಲಿ ಬಡತನ ಹೆಚ್ಚುತ್ತಿದೆ. ಸಿರಿವಂತರು ಮತ್ತಷ್ಟು ಸಿರಿವಂತರಾಗುತ್ತಿದ್ದಾರೆ. ಈ ಬಗ್ಗೆ ಬಜೆಟ್‌ನಲ್ಲಿ ಅಭಿವೃದ್ಧಿಗೆ ಸ್ಪಷ್ಟ ಪರಿಹಾರ ಇಲ್ಲ. ರೈತಾಪಿ, ಕಾರ್ಮಿಕರಿಗೆ ಧೈರ್ಯ ತುಂಬುವ ಅಥವಾ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಅಂಶಗಳು ಈ ಬಜೆಟ್ ನಲ್ಲಿ ಇರಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ವರ್ಷ ಕಳೆವ ಬಜೆಟ್: ನದಿ ಜೋಡಣೆ ಬಗ್ಗೆ ಮೂರು ವರ್ಷದಿಂದ ಹೇಳುತ್ತಿದ್ದಾರೆ. ಕಾವೇರಿ-ಪೆನ್ನಾರ್, ಕೃಷ್ಣ-ಗೋದಾವರಿ ನದಿಗಳ ಜೋಡಣೆ ಬಗ್ಗೆ ಹೇಳಿದ್ದಾರೆ, ಕಾರ್ಯರೂಪಕ್ಕೆ ಬರಬೇಕಿದೆ. ಹೆಚ್ಚಿನ ತೆರಿಗೆ ವಿಧಿಸಿಲ್ಲ ಅನ್ನುವುದು ಬಿಟ್ಟರೇ ಬೇರೆ ಏನೂ ಇಲ್ಲ. ಹೊಸ ಕಾರ್ಯಕ್ರಮವಿಲ್ಲ. ವರ್ಷ ಕಳೆಯುವ ಬಜೆಟ್ ಅಷ್ಟೇ ಇದು ಎಂದು ಎಚ್‌ಡಿಕೆ ಬಣ್ಣಿಸಿದರು.

ರಾಜ್ಯ ಸರ್ಕಾರಕ್ಕೆ ಅಭಿನಂದನೆ: ಹಾರೋಹಳ್ಳಿ ಹೊಸ ತಾಲೂಕು ಘೋಷಣೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಕುಮಾರಸ್ವಾಮಿ, ಪಟ್ಟಣವನ್ನು ತಾಲೂಕು ಕೇಂದ್ರ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹಾಪ್‌ಕಾಮ್ಸ್ ದೇವರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್, ಮುಖಂಡರಾದ ದ್ಯಾವಪಟ್ಟಣ ಮಲ್ಲೇಶ್, ಮೋಳೆದೊಡ್ಡಿ ಬಿಳಿಯಪ್ಪ, ತಮ್ಮಣ್ಣಗೌಡ, ಎಂಜಿಕೆ ಪ್ರಕಾಶ್, ದೊಡ್ಡಮಳೂರು ಮುರಳೀಧರ್ ಸೇರಿ ಹಲವು ಮುಖಂಡರು ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

ಪಾದೆಯಾತ್ರೆಯಿಂದ ಅಣೆಕಟ್ಟೆ ಸಾಧ್ಯವಿಲ್ಲ: ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಯಿಂದ ಅಣೆಕಟ್ಟು ಕಟ್ಟಲು ಸಾಧ್ಯವಿಲ್ಲ. ಅವರ ಶಕ್ತಿ ಬೆಳೆಸಿಕೊಳ್ಳಲು ಪಾದಯಾತ್ರೆ ಮಾಡ್ತಿದ್ದಾರೆ. ಈಗ ಎರಡನೇ ಹಂತದ ಪಾದಯಾತ್ರೆ ಎನ್ನುತ್ತಿದ್ದಾರೆ. ಇದರಿಂದ ಸಮಸ್ಯೆ ಬಗೆಹರಿಯಲ್ಲ. 5 ವರ್ಷ ಕಾಂಗ್ರೆಸ್ ಸರ್ಕಾರ ಇತ್ತು, ಆಗ ಏಕೆ ಈ ಯೋಜನೆ ಬಗ್ಗೆ ಚಿಂತನೆ ಮಾಡಲಿಲ್ಲ. ಈ ಯೋಜನೆಗೆ ಸಂಬಂಧಿಸಿದಂತೆ ನಾನು ಸಿಎಂ ಆಗಿದ್ದಾಗ ಗಡ್ಕರಿಯವರನ್ನು ಭೇಟಿ ಮಾಡಿದ್ದೆ. ಆಗ ಡಿಪಿಆರ್‌ಗೆ ಅನುಮತಿ ಕೊಟ್ಟರು, ನಾನು ಕೊಟ್ಟ ಡಿಪಿಆರ್ ಈಗ ಜೀವಂತವಾಗಿದೆ, ಅದನ್ನು ಅನುಷ್ಠಾನ ಮಾಡಬೇಕಿದೆ ಎಂದು ಎಚ್‌ಡಿಕೆ ಹೇಳಿದರು.

ಡಿಕೆಸು ವಿರುದ್ಧ ವಾಗ್ದಾಳಿ: ನಮ್ಮುನ್ನು ಟೀಕಿಸುವ ಸಂಸದ ಡಿ.ಕೆ.ಸುರೇಶ್ ಅವರು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ನಿರೂಪಿಸಬೇಕು. ಸಂಸದರಾಗಿ 7 ವರ್ಷ ಆಯ್ತು, 5 ವರ್ಷ ಅವರದ್ದೇ ಸರ್ಕಾರ ಇತ್ತು. ಆಗ ಏಕೆ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಸತ್ತೇಗಾಲದಿಂದ ಕನಕಪುರಕ್ಕೆ ನೀರು ತೆಗೆದುಕೊಂಡು ಹೋಗಲು ಪ್ಲ್ಯಾನ್ ಮಾಡಿದ್ದರು, 540 ಕೋಟಿ ರೂಪಾಯಿ ವೆಚ್ಚದ ನೀರಾವರಿ ಯೋಜನೆಯನ್ನು ರಾಮನಗರ, ಚನ್ನಪಟ್ಟಣ, ಮಾಗಡಿಗೆ ನೀರು ಕೊಡಲು ನಾನು ಯೋಜನೆ ರೂಪಿಸಿದೆ. ಈ ಹಿಂದೆ ರಾಮನಗರ ಹೊಸ ಜಿಲ್ಲೆ ರಚನೆಯಾದಾಗಲೂ ವಿರೋಧಿಸಿದ್ದರು. ಇವರ ಕೊಡುಗೆ ಏನಿದೆ? ಕೇವಲ ಚಿತಾಗಾರ ನೋಡಿಕೊಂಡು ಬಂದಿದ್ದು ಇವರ ಸಾಧನೆಯೇ ಎಂದು ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಯೋಗೇಶ್ವರ್‌ಗೂ ಟಾಂಗ್: ನಗರದ ಅಭಿವೃದ್ಧಿಗೆ ಸಿ.ಪಿ.ಯೋಗೇಶ್ವರ್ ನಗರೋತ್ಥಾನ ಯೋಜನೆಯಲ್ಲಿ 30 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿಸಿದ್ದಾರೆ ಎಂಬ ಹೇಳಿಕೆಗೆ ಟಾಂಗ್ ನೀಡಿದ ಕುಮಾರಸ್ವಾಮಿ, ರಾಮನಗರಕ್ಕೂ 40 ಕೋಟಿ ರೂಪಾಯಿ ಬಂದಿದೆ, ಅದನ್ನು ಅವರೇ ತಂದಿದ್ದಾರೆಯೇ?, ಇವರು ಮಂತ್ರಿಯಾಗಿದ್ದವರು, ಜಿಲ್ಲೆ ಮತ್ತು ತಾಲೂಕು ಅಭಿವೃದ್ಧಿಗೆ ಎಷ್ಟು ಹಣ ತಂದಿದ್ದಾರೆ ಎನ್ನುವ ಬಹಿರಂಗ ಚರ್ಚೆಗೆ ಬರಲಿ. ಈ ಹಿಂದೆ ಕೇವಲ 20 ಕೆರೆ ತುಂಬಿಸಿದ್ದೇ ದೊಡ್ಡ ಸಾಧನೆ ಎಂದು ಬಿಂಬಿಸಿಕೊಂಡರು. ಇವತ್ತು ನಾವು ತಾಲೂಕಿನಲ್ಲಿ 120 ಕೆರೆಗಳನ್ನು ತುಂಬಿಸಿದ್ದೇವೆ. ದೇವೇಗೌಡರು ಇಗ್ಗಲೂರು ಬ್ಯಾರೇಜ್ ಕಟ್ಟದಿದ್ದರೆ ಎಲ್ಲಿಂದ ನೀರು ತರುತ್ತಿದ್ದರು ಎಂದು ಪ್ರಶ್ನಿಸಿದ ಅವರು, ನಮ್ಮ ಕುಟುಂಬದ ಕೊಡುಗೆ ಜಿಲ್ಲೆಗೆ ದೊಡ್ಡಮಟ್ಟದಲ್ಲಿದೆ ಎಂದರು.

ನಿರ್ಧಾರದಿಂದ ಹಿಂದೆ ಸರಿಯಲ್ಲ: ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರ ಬಗ್ಗೆ ಸಾಫ್ಟ್ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮಂಡ್ಯದಲ್ಲಿ ಮಾಧ್ಯಮದವರು ಶಿವರಾಮೇಗೌಡರು ಕ್ಷಮೆ ಕೇಳಿದರೆ ಏನು ಮಾಡುತ್ತೀರಿ ಎಂದು ಪ್ರಶ್ನೆ ಕೇಳಿದ್ದರು. ಕ್ಷಮೆ ಕೇಳಿದರೆ ನೋಡೋಣ ಎಂದಿದ್ದೆ ಅಷ್ಟೇ. ಇಲ್ಲಿ ಅಪರಾಧ ಆಗಿದೆ, ತೀರ್ಮಾನವೂ ಆಗಿದೆ. ಕ್ಷಮೆ ಕೇಳಿದರೆ ಬದಲಾವಣೆ ಆಗುವ ವಿಚಾರ ನನ್ನ ಮುಂದೆ ಇಲ್ಲ. ನಾನು ಈ ವಿಚಾರದಲ್ಲಿ ಸಾಫ್ಟ್ ಕಾರ್ನರ್ ಆಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.