ಭಾಲ್ಕಿ: ಬಸವಭೂಮಿಯಲ್ಲಿ ಬಸವರಥ ಯಾತ್ರೆಗೆ ಚಾಲನೆ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಸಂತಸ ವ್ಯಕ್ತಪಡಿಸಿದರು.
ಭಾರತೀಯ ಸಂಸ್ಕೃತಿ ಉತ್ಸವ ನಿಮಿತ್ತ ಪಟ್ಟಣದ ಹಿರೇಮಠ ಸಂಸ್ಥಾನ ಆವರಣದಲ್ಲಿ ಶುಕ್ರವಾರ ಬಸವ ರಥಯಾತ್ರೆಗೆ ಚಾಲನೆ ನೀಡಿದ ಅವರು, ಬಸವರಾಜ ಪಾಟೀಲ ಸೇಡಂ ನೇತೃತ್ವದಲ್ಲಿ ದೇಶಾಭಿಮಾನ ಮೂಡಿಸುವಂಥ ಚಟುವಟಿಕೆಗಳು ನಡೆದಿವೆ. ರಾಷ್ಟ್ರದ ಅಭಿವೃದ್ಧಿಗೆ ಬಸವತತ್ವ ಅತ್ಯವಶ್ಯಕ ಎಂಬುದನ್ನು ಎಲ್ಲರೂ ಒಪ್ಪಲೇಬೇಕಿದೆ ಎಂದರು.
ವಿಕಾಸ ಅಕಾಡೆಮಿ ಸಹ ಸಂಚಾಲಕ ರೇವಣಸಿದ್ದ ಜಾಡರ ಮಾತನಾಡಿ, ಆಧುನಿಕತೆ ಜತೆಗೆ ಪ್ರಾಚೀನ ಪರಂಪರೆ ಸಂಸ್ಕೃತಿಯನ್ನೂ ಗೌರವಿಸುವ ಅಗತ್ಯವಿದೆ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷ ಶಂಭುಲಿಂಗ ಕಾಮಣ್ಣ ಮಾತನಾಡಿ, ಉತ್ತಮ ಗುರುಪರಂಪರೆ ಇದ್ದಾಗಲೇ ಪ್ರತಿಭಾವಂತ ವಿದ್ಯಾರ್ಥಿಗಳು ತಯಾರಾಗುತ್ತಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿ, ಬಸವರಾಜ ಪಾಟೀಲ ಸೇಡಂ ಅವರ ದೇಶಭಕ್ತಿ ಕಾರ್ಯ ಮೆಚ್ಚುವಂಥದ್ದು ಎಂದು ಕೊಂಡಾಡಿದರು.
ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಪ್ರಮುಖರಾದ ಗುಂಡಪ್ಪ ಸಂಗಮಕರ, ಸೋಮನಾಥಪ್ಪ ಅಷ್ಟೂರೆ, ಜಯರಾಜ ದಾಬಶೆಟ್ಟಿ, ಸಂತೋಷ ಹಡಪದ, ಸಂತೋಷ ಬಿಜಿ ಪಾಟೀಲ, ಬಾಬು ಬೆಲ್ದಾರ, ಬಾಬು ಲಾದಾ, ಶಾಂತಯ್ಯಾ ಸ್ವಾಮಿ ಉಪಸ್ಥಿತರಿದ್ದರು.
ವಿಕಾಸ ಅಕಾಡೆಮಿ ತಾಲೂಕು ಸಂಚಾಲಕ ಅಕ್ಷಯಕುಮಾರ ಮುದ್ದಾ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು. ನ್ಯಾಯವಾದಿ ರಾಜಶೇಖರ ಅಷ್ಟೂರೆ ಬಸವಗುರು ಪೂಜೆ ನೆರವೇರಿಸಿದರು. ವಿಕಾಸ ಅಕಾಡೆಮಿಯ ಸಹ ಸಂಚಾಲಕ ರೇವಣಸಿದ್ಧ ಜಾಡರ್ ಸ್ವಾಗತಿಸಿದರು. ಮಲ್ಲಿಕಾರ್ಜುನ ರಂಜೋಳಕರ್ ನಿರೂಪಿದರು. ಸಂಚಾಲಕ ಅಕ್ಷಯ ಮುದ್ದಾ ವಂದಿಸಿದರು.