ಬೀದರ್: ಬಸವ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಪಾವನವಾಗಲಿದೆ ಎಂದು ಹುಲಸೂರು ಶ್ರೀಗುರು ಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.
ಜಿಲ್ಲಾ ಬಸವ ಕೇಂದ್ರದಲ್ಲಿ ನಗರದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಶರಣ ಸಂಗಮ ಹಾಗೂ ಅಲ್ಲಮಪ್ರಭು ದೇವರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಬಸವಾದಿ ಶರಣರು ಹೇಳಿದಂತೆ ಸತ್ಯ-ಶುದ್ಧ ಕಾಯಕ ಮಾಡಬೇಕು. ಶಿವಶರಣರಲ್ಲಿ ಅಲ್ಲಮಪ್ರಭು ಪ್ರಮುಖರು. ಕಲ್ಯಾಣಕ್ಕೆ ಆಗಮಿಸಿದ ಅಲ್ಲಮಪ್ರಭು ಅನುಭವ ಮಂಟಪದ ಶೂನ್ಯ ಸಂಹಾಸನದ ಅಧ್ಯಕ್ಷರಾಗಿದ್ದರು. ಬಸವಣ್ಣನವರ ಸಮಕಾಲೀನರಾಗಿದ್ದ ಅವರು ತಮ್ಮ ವಚನಗಳಲ್ಲಿ ಅಧ್ಯಾತ್ಮ, ತಾತ್ವಿಕ ವಿಚಾರಗಳಿಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ ಎಂದರು.
ಶಿಕ್ಷಕ ಶಿವಲಿಂಗ ಹೇಡೆ ಉಪನ್ಯಾಸ ನೀಡಿ, ಅಲ್ಲಮಪ್ರಭು ದೇವರು ೧೨ನೇ ಶತಮಾನದಲ್ಲಿ ಬಳ್ಳಿಗಾವಿಯಿಂದ ಕಲ್ಯಾಣವರೆಗೆ ಸಂಚರಿಸಿ ಅನೇಕರನ್ನು ಅಧ್ಯಾತ್ಮ ಜೀವಿಗಳನ್ನಾಗಿ ಪರಿವರ್ತಿಸಿದ್ದಾರೆ ಎಂದು ಸ್ಮರಿಸಿದರು.
ರಾಷ್ಟ್ರೀಯ ಬಸವದಳ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ ಉದ್ಘಾಟಿಸಿ ಮಾತನಾಡಿದರು. ಬಸವ ಕೇಂದ್ರ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಮತ್ತು ಅರೆಸರ್ಕಾರಿ ನೌಕರರ ಸಹಕಾರ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ವಚನ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಡಾ.ಸುರೇಶ ಪಾಟೀಲ್, ಶೋಭಾದೇವಿ ಶಿವಶಂಕರ ಟೋಕರೆ ಇತರರಿದ್ದರು.
ಶಿವಕುಮಾರ ಸಾಲಿ ಸ್ವಾಗತಿಸಿದರು. ಜಗನ್ನಾಥ ಶಿವಯೋಗಿ ನಿರೂಪಣೆ ಮಾಡಿದರು. ಪ್ರೊ.ವಿದ್ಯಾವತಿ ಬಲ್ಲೂರ ವಂದಿಸಿದರು. ಎನ್‌ಜಿಒ ನೌಕರರ ಸಹಕಾರ ಸಂಘದ ನೂತನ ಅಧ್ಯಕ್ಷ ಬಾಲಾಜಿ ಬಿರಾದರ್, ನಿರ್ದೇಶಕರು ಹಾಗೂ ಅಲ್ಲಮಪ್ರಭು ನಾವದಗೆರೆ ಅವರನ್ನು ಸನ್ಮಾನಿಸಲಾಯಿತು.
ಜ್ಞಾನ ಹಾಗೂ ಅರಿವಿನ ಕಾರಣದಿಂದ ಅಲ್ಲಮಪ್ರಭುಗಳು ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾದರು. ಎಲ್ಲ ಶರಣರ ವಿಚಾರಗಳನ್ನು ಪರೀಕ್ಷಿಸುವ ಮತ್ತು ವಿಮರ್ಶಿಸುವ ಸಾಮರ್ಥ್ಯ ಹೊಂದಿದ್ದರು.
| ಸೋಮಶೇಖರ ಪಾಟೀಲ್ ಗಾದಗಿ
ರಾಷ್ಟ್ರೀಯ ಬಸವದಳ ಜಿಲ್ಲಾಧ್ಯಕ್ಷ