ಹುಲಸೂರಿನಲ್ಲಿ ಶ್ರೀ ಬಸವಕುಮಾರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವಕ್ಕೆ ಶುಕ್ರವಾರ ಸಾಹಿತಿ ಜೆ.ಎಸ್.ಪಾಟೀಲ ಚಾಲನೆ ನೀಡಿದರು. ಸಾಣೆಹಳ್ಳಿ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯರು, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸಾಯಿಗಾಂವದ ಶ್ರೀ ಶಿವಾನಂದ ಸ್ವಾಮೀಜಿ ಇತರರಿದ್ದರು. 
ಜಿಲ್ಲೆ

ಬಸವತತ್ವ ತಳಹದಿಯಲ್ಲಿ ಆದರ್ಶ ಜೀವನ

ಹುಲಸೂರು: ಬಸವ ತತ್ವದ ತಳಹದಿಯ ಮೇಲೆ ನಡೆದು ಆದರ್ಶ ಜೀವನ ರೂಪಿಸಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

ಪಟ್ಟಣದಲ್ಲಿ ಶುಕ್ರವಾರ ಸಂಜೆ ಲಿಂ.ಜಗದ್ಗುರು ಬಸವಕುಮಾರ ಶಿವಯೋಗಿಗಳವರ ೪೯ನೇ ಪುಣ್ಯಸ್ಮಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಜೀವನದಲ್ಲಿ ಆಸ್ತಿ, ಅಧಿಕಾರ, ಐಶ್ವರ್ಯ ಶಾಶ್ವತವಲ್ಲ. ಮಾಡಿದ ಸತ್ಕಾರ್ಯ. ನೀಡಿದ ಆದರ್ಶ ಸದಾ ನೆನಪಾಗಿ ಉಳಿಯುತ್ತದೆ. ಆದರ್ಶ ವ್ಯಕ್ತಿಯಾಗಿ ಬದುಕಬೇಕು ಎಂದರು.

ದೇವರಿಗಾಗಿ ಗುಂಡಿ-ಗುಂಡಾರ ಸುತ್ತುವುದು ನಮ್ಮ ಸಂಸ್ಕೃತಿಯಲ್ಲ. ದೇವರು ಸರ್ವಾಂತರಯಾಮಿ, ಸರ್ವ ಶಕ್ತ. ಶರಣರು ನೀಡಿದ ತತ್ವ ಅರ್ಥ ಮಾಡಕೊಂಡರೆ ತೀರ್ಥ ಕ್ಷೇತ್ರಗಳಿಗೆ ಸುತ್ತುವ ಅವಶ್ಯಕತೆ ಇಲ್ಲ. ಇರುವಲ್ಲಿಯೇ ದಿನದ ಎರಡು ಹೊತ್ತು ಇಷ್ಟಲಿಂಗ ಪೂಜೆ ಮಾಡಿಕೊಂಡರೆ ತೀರ್ಥ ಕ್ಷೇತ್ರಕ್ಕೆ ಹೋಗುವ ಅಗತ್ಯವಿಲ್ಲ. ನಮ್ಮನ್ನು ನಾವು ಅರ್ಥ ಮಾಡಿಕೊಂಡು ಧರ್ಮದ ತಳಹದಿಯ ಮೇಲೆ ನಡೆಯಲು ಪ್ರಯತ್ನಿಸಬೇಕು ಎಂದರು.

ಉದ್ಘಾಟನೆ ನೆರವೇರಿಸಿದ ಸಾಹಿತಿ ಜೆ.ಎಸ್.ಪಾಟೀಲ ಮಾತನಾಡಿ, ಲಿಂಗಾಯತ ಧರ್ಮ, ಶರಣ ಸಂಸ್ಕೃತಿಯನ್ನು ಅಳವಡಿಸಿಕೊಂಡು ಶರಣರು ತೋರಿದ ಮಾರ್ಗದಲ್ಲಿ ನಡೆದಾಗ ಶಾಂತಿ, ನೆಮ್ಮದಿಯಿಂದ ಕೂಡಿದ ಸಾರ್ಥಕ ಬದುಕು ನಡೆಸಲು ಸಾಧ್ಯವಾಗುತ್ತದೆ. ಗುಡಿ-ಗುಂಡಾರ ಸಂಸ್ಕೃತಿಯಿಂದ ಹೊರ ಬರಬೇಕು.ವೈಚಾರಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು ಆಶೀರ್ವಚನ ನೀಡಿದರು. ಸಾಯಗಾಂವದ ಶ್ರೀ ಶಿವಾನಂದ ಸ್ವಾಮೀಜಿ , ಮಂಠಾಳದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ ಇತರರಿದ್ದರು. ದೀಪಕ ಠಮಕೆ ನಿರೂಪಣೆ ಮಾಡಿದರು.