ಜಿಲ್ಲೆ

ಬಸವಣ್ಣರ ತತ್ವಸಿದ್ಧಾಂತ ಅಳವಡಿಸಿಕೊಳ್ಳಿ

ಹೊಳೆನರಸೀಪುರ: ಸಾಮಾಜಿಕ ಮತ್ತು ಧಾರ್ಮಿಕ ಅಸಮಾನತೆಯನ್ನು 12ನೇ ಶತಮಾನದಲ್ಲಿ ತೊಡೆದು ಹಾಕಲು ಶ್ರಮಿಸಿದ ಮಹಾನ್ ಕ್ರಾಂತಿಕಾರಿ ಬಸವಣ್ಣನವರ ಗುಣ, ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಮಾತ್ರ ನಾವು ಅವರಿಗೆ ನಮನ ಸಲ್ಲಿಸಿದಂತಾಗುತ್ತದೆ ಎಂದು ಟಿ. ಮಾಯಿಗೌಡನಹಳ್ಳಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶರಣ ಸಾಹಿತ್ಯ ಪರಿಷತ್ ವತಿಯಿಂದ ವಚನ ಗಾಯನ ಕಂಠ ಪಾಠ ಮಾಡಿದ ವಿದ್ಯಾರ್ಥಿಗಳಿಗೆ ಬುಧವಾರ ತಾಲೂಕಿನ ಹಳ್ಳಿ ಮೈಸೂರು ಹೋಬಳಿ ದೊಡ್ಡಕಾಡನೂರು ಗ್ರಾಮದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಚನ ಪುಸ್ತಕಗಳನ್ನು ವಿತರಣೆ ಮಾಡಿ ಮಾತನಾಡಿದರು.

ನಿವೃತ್ತ ಪ್ರಾಂಶುಪಾಲ ಹಾಗೂ ಸಾಹಿತಿ ಎಚ್.ಎಸ್.ಪ್ರಭುಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉದಾತ್ತ ತತ್ವಗಳ ಅರಿವು ಮತ್ತು ಅನುಷ್ಠಾನಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಉಂಟು ಮಾಡಲು ಲಿಂಗೈಕ್ಯ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಸ್ವಾಜೀಜಿ ಅವರು 1986 ರಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಪ್ರತಿಯೊಬ್ಬರೂ ಅವರ ಚಿಂತನೆಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶರಣೆ ಕಾವ್ಯಶ್ರೀಕೃಷ್ಣ, ಕಾಲೇಜಿನ ಪ್ರಾಂಶುಪಾಲ ಡಾ.ಚೌಡಯ್ಯ ಕಟ್ನವಾಡಿ, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಮುಖ್ಯಶಿಕ್ಷಕ ಪಿ. ಸುರೇಶ್ , ತಾಲೂಕು ಪರಿಷತ್ ಅಧ್ಯಕ್ಷ ಪ್ರಸಾಧ್, ಕಾರ್ಯದರ್ಶಿ ರಾಮನಾಥಪುರ ಅರ್.ಕೆ.ಶ್ರೀನಿವಾಸ್, ನಿವೃತ್ತ ಶಿಕ್ಷಕ ಶಂಕರಪ್ಪ ಹಾಗೂ ಶಿಕ್ಷಕರ ವರ್ಗ ಉಪಸ್ಥಿತರಿದ್ದರು.