ಹಳಿಯಾಳ: ಬಸವಣ್ಣನವರ ಸಂದೇಶ ಸಾರಲು ದೇಶಾದ್ಯಂತ ಎರಡನೇ ಬಾರಿಗೆ ಬಸವಜ್ಯೋತಿ ಸದ್ಭಾವನಾ ಪಾದಯಾತ್ರೆ ಆರಂಭಿಸಿ ಭಾನುವಾರ ಪಟ್ಟಣಕ್ಕೆ ಬಂದ ಗುರುಬಸವೇಶ್ವರ ಸಂಸ್ಥಾನ ಮಠ ಹುಲಸೂರಿನ ಶ್ರೀ ಮ.ನಿ.ಪ್ರ. ಡಾ. ಶಿವಾನಂದ ಮಹಾಸ್ವಾಮಿಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಪಟ್ಟಣದ ಬಸವೇಶ್ವರ ಪುತ್ಥಳಿ ವರ್ತಳದಲ್ಲಿ ಬಸವಕೇಂದ್ರದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಶ್ರೀಗಳನ್ನು ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಡಾ. ಶಿವಾನಂದ ಶ್ರೀಗಳು, ದೇಶದ ಜನತೆಗೆ ಬಸವಣ್ಣನವರ ಸಂದೇಶ ತಿಳಿಸುವ ಹುಚ್ಚು ನನಗೆ ಹಿಡಿದಿದೆ. ಇದನ್ನು ಕಂಡು ಕೆಲವರು ಗೇಲಿ ಮಾಡಿದರು. ಆದರೆ, ಅವರ ಅಪಹಾಸ್ಯ ಮತ್ತು ಕೊಂಕು ಮಾತುಗಳನ್ನೇ ನಾನು ಪ್ರೇರಣೆಯನ್ನಾಗಿ ತೆಗೆದುಕೊಂಡು ನನ್ನ ಪಾದಯಾತ್ರೆಯನ್ನು ಮುಂದುವರಿಸಿದ್ದೇನೆ ಎಂದರು.
ಮೂಢನಂಬಿಕೆ ಕಂದಾಚಾರಗಳನ್ನು ಹೋಗಲಾಡಿಸಿ, ಕಾಯಕವೇ ಕೈಲಾಸ, ದೇವನೊಬ್ಬ ನಾಮ ಹಲವು, ದಯವಿಲ್ಲದ ಧರ್ಮ ಯಾವುದಯ್ಯ ಎಂದು ಸಾರುತ್ತ ಜಿಡ್ಡುಗಟ್ಟಿದ ಸಮಾಜವನ್ನು ಸ್ವಚ್ಛ ಮಾಡಿದರು. ಸಾಮಾಜಿಕ ಕ್ರಾಂತಿಯ ಹರಿಕಾರನ ತತ್ವ್ತಗಳು ಪ್ರತಿ ಮನಗಳಿಗೂ ತಲುಪುವ ಕಾರ್ಯವಾಗಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಹಳಿಯಾಳ ಬಸವಕೇಂದ್ರದ ಅಧ್ಯಕ್ಷ ಚಂದ್ರಕಾಂತ ಅಂಗಡಿ ವಹಿಸಿದ್ದರು. ಸಾಯಗಾಂವ್ ವಿರಕ್ತಮಠದ ಶ್ರೀ ಶಿವಾನಂದ ಸ್ವಾಮಿ, ಅಧ್ಯಾತ್ಮಿಕ ಚಿಂತಕ ಡಾ.ಟಿ.ಸಿ. ಮಲ್ಲಾಪೂರಮಠ, ವಕೀಲ ಪ್ರಕಾಶ ಅಂಗಡಿ, ಮಹಾದೇವಿ ಅಂಗಡಿ, ಮಂಜುನಾಥ ಎಂ., ಸೋಮಶೇಖರ ಹಿರೇಮಠ, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ಮೇದಾರ ಸಮಾಜದ ಅಧ್ಯಕ್ಷ ಶಿವಾನಂದ ನೇಸರ್ಗಿ, ಬಸವಣ್ಣೆಪ್ಪ ಸೌಂದತ್ತಿ, ಈರಣ್ಣ ಕೊಟ್ಟಣ, ಕೆ.ಬಿ. ಹುಬ್ಬಳ್ಳಿ ಇದ್ದರು. ಸುಮಂಗಲಾ ಅಂಗಡಿ ನಿರ್ವಹಿಸಿದರು.