ಭಾಲ್ಕಿ: ವಿಶ್ವಗುರು ಬಸವಣ್ಣನವರ ತತ್ವಗಳು ಜಗತ್ತಿಗೆ ಮಾದರಿಯಾಗಿವೆ. ಅವರು ಸಾರಿರುವ ಸಂದೇಶದ ಬಗ್ಗೆ ಸಾಕಷ್ಟು ತಿಳಿದು ಕೊಂಡಿದ್ದೇನೆ ಎಂದು ಚಂಡಿಪುರ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿರ್ದೇಶಕ ಸುಭೋದಕುಮಾರ ನಾಯಕ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಬುಧವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ೧೨ನೆಯ ಶತಮಾನದಲ್ಲಿ ಸಮಾನತೆ ಸಾರುವುದರ ಜತೆಗೆ ವಿಶ್ವಕ್ಕೆ ಮೊದಲ ಸಂಸತ್ತು ಪರಿಚಯಿಸಿದ ಬಸವಣ್ಣನವರ ಭೂಮಿಗೆ ಬಂದಿರುವುದು ಅತ್ಯಂತ ಖುಷಿ ತಂದು ಕೊಟ್ಟಿದೆ ಎಂದರು.
ಈ ಭಾಗದಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಧರ್ಮ ಪ್ರಚಾರದ ಜತೆಗೆ ಮಕ್ಕಳಿಗೆ ಶಿಕ್ಷಣ ಕಲ್ಪಿಸಿ ದೇಶದ ಸತ್ಪö್ರಜೆಗಳನ್ನಾಗಿ ರೂಪಿಸುತ್ತಿರುವುದು ಹೆಮ್ಮೆ ತರಿಸಿದೆ ಎಂದು ಹೇಳಿದರು.
ಹಿರಿಯ ವಿಜ್ಞಾನಿ ವಿದ್ಯಾವತಿ ಸುಭೋದಕುಮಾರ ನಾಯಕ ಮಾತನಾಡಿ, ಗಡಿಭಾಗದಲ್ಲಿ ಸ್ವತಂತ್ರ ಪೂರ್ವ ಮತ್ತು ನಂತರದಲ್ಲಿ ಪೂಜ್ಯರು ಕಟ್ಟಿರುವ ವಿದ್ಯಾ ಸಂಸ್ಥೆಯಲ್ಲಿ ಬಡಮಕ್ಕಳು ವಿದ್ಯೆ ಕಲಿತು ನಾಡಿಗೆ, ರಾಷ್ಟçಕ್ಕೆ ಕೊಡುಗೆ ನೀಡುತ್ತಿದ್ದಾರೆ. ಅದರಲ್ಲಿ ನಾನು ಕೂಡ ಒಬ್ಬಳಾಗಿರುವುದು ಸಂತಸ ತರಿಸಿದೆ ಎಂದು ತಿಳಿಸಿದರು.
ನೇತೃತ್ವ ವಹಿಸಿದ್ದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಸ್ವತಂತ್ರ ಪೂರ್ವದಲ್ಲಿಯೇ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ಶಿಕ್ಷಣ ಸಂಸ್ಥೆ ತೆರೆದಿದ್ದರು. ಪರಿಣಾಮ ಈ ಭಾಗದ ಹಿಂದುಳಿದ ಹಣೆಪಟ್ಟಿ ಕಳಚಿ ಇದೀಗ ಎಲ್ಲ ರಂಗದಲ್ಲಿ ಬೆಳವಣಿಗೆ ಸಾಧಿಸುತ್ತಿದೆ ಎಂದು ಹೇಳಿದರು.
ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯಸಾನ್ನಿಧ್ಯ, ಶ್ರೀ ಮಹಾಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕ ಮಾತನಾಡಿದರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಮಾರುತಿರಾವ, ವಿಷ್ಣು ಪಾಟೀಲ್, ಸಹಾದೇವ ಇತರರಿದ್ದರು. ಭವಾನಿ ವಚನ ಗಾಯನ ನಡೆಸಿಕೊಟ್ಟರು. ಬಾಬು ಬೆಲ್ದಾಳ ನಿರೂಪಣೆ ಮಾಡಿ ವಂದಿಸಿದರು.
ವಿದ್ಯಾರ್ಥಿಗಳು ಶೈಕ್ಷಣಿಕ ಅಭ್ಯಾಸದ ಜತೆಗೆ ದೇಶಭಕ್ತಿ, ರಾಷ್ಟ್ರಪ್ರೇಮ ಬೆಳೆಸಿ ಕೊಂಡು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಬೇಕು.
| ಸುಭೋದಕುಮಾರ ನಾಯಕ
ನಿರ್ದೇಶಕ ಡಿಆರ್‌ಡಿಒ ಚಂಡಿಪುರ
ಭಾರತದ ವಿಜ್ಞಾನಿಗಳ ನಿರಂತರ ಪರಿಶ್ರಮ, ಸಂಶೋಧನೆಯ ಪರಿಣಾಮ ಭಾರತ ಜಗತ್ತಿನಲ್ಲಿಯೇ ಶಕ್ತಿಶಾಲಿ ರಾಷ್ಟ್ರವಾಗಿ ರೂಪಗೊಳ್ಳುತ್ತಿದೆ.
| ಶ್ರೀ ಗುರುಬಸವ ಪಟ್ಟದ್ದೇವರು
ಹಿರೇಮಠ ಸಂಸ್ಥಾನ ಭಾಲ್ಕಿ
====