ಜಿಲ್ಲೆ

ಬಸವಣ್ಣನವರ ವಿಚಾರ ಜಾಗೃತಿ ಅವಶ್ಯ

ಚಿಕ್ಕೋಡಿ: ಬಸವಣ್ಣನವರ ಆಚಾರ, ವಿಚಾರಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅವಶ್ಯವಿದೆ ಎಂದು ಯಮಕನಮರಡಿ ಜಗದ್ಗುರು ಶೂನ್ಯ ಸಂಪಾದನಾ ಹುಣಸಿಕೊಳ್ಳಮಠದ ಸಿದ್ದಬಸವ ದೇವರು ಹೇಳಿದರು.

ಇಲ್ಲಿನ ಮಹಾದೇವ ಮಂದಿರದಲ್ಲಿ ಭಾನುವಾರ ವಿಶ್ವಗುರು, ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ೮೯೨ನೇ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ, ಕೃತಿ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಲಿಂಗಾಯತರು ಜಾಗೃತರಾಗಿ ಯುವ ಪೀಳಿಗೆಗೆ ಬಸವಣ್ಣನವರ ಕುರಿತು ಅರಿವು ಮೂಡಿಸಬೇಕು. ಧರ್ಮಕ್ಕಾಗಿ ಒಗ್ಗಟ್ಟಿನ ಹೋರಾಟದ ಜತೆಗೆ ಯುವಕರಲ್ಲಿ ಆತ್ಮಸ್ಥರ್ಯ ಹೆಚ್ಚಿಸಬೇಕು. ಎಲ್ಲ ಒಳಪಂಗಡಗಳ ಲಿಂಗಾಯತರು ಒಂದಾಗಬೇಕು ಎಂದರು. ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, ಲಿಂಗಾಯತರಲ್ಲಿ ಒಳಪಂಗಡಗಳು ಹೆಚ್ಚಾಗಿವೆ. ಎಲ್ಲರೂ ಒಂದಾಗಿ ಲಿಂಗಾಯತ ಸಮುದಾಯದ ಒಳಿತಿಗಾಗಿ ಹೋರಾಟ ಮಾಡಬೇಕು ಎಂದರು.

ಲಿಂಗಾಯತ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಶಂಕರ ಗುಡಸ ಹಾಗೂ ಬೆಂಗಳೂರಿನ ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಜಿ.ಪಾಟೀಲ ಮಾತನಾಡಿದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಬಸವರಾಜ ಪಾಟೀಲ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಬಸವ ಕಾಯಕ ಶ್ರೀ ಪ್ರಶಸ್ತಿ ನೀಡಲಾಯಿತು.

ದುಂಡಪ್ಪ ಬೆಂಡವಾಡೆ, ರವಿ ಹಂಪನ್ನವರ, ಕಲ್ಮೇಶ ಕಿವಡ, ರಮೇಶ ಹಿತ್ತಲಮನಿ, ಆರ್.ಐ.ಖೋತ, ರಮೇಶ ಕಾಳನ್ನವರ, ಡಾ.ಸುರೇಶ ಉಕ್ಲಿ, ಸದಾಶಿವ ಹಚಡದ, ಮನೋಜ ಮಂಗಾಜ, ಮಂಜುನಾಥ ಜನಮಟ್ಟಿ, ಮಾಚಿದೇವ ಬೋಸಲೆ ಇತರರಿದ್ದರು. ಸಿದ್ಧಾರೂಢ ಮುದ್ದನಗೌಡರ ಪ್ರಾಸ್ತಾವಿಕ ಮಾತನಾಡಿದರು. ಸುಭಾಷ ಸಂಕಪಾಳ ನಿರೂಪಿಸಿದರು.