12ನೇ ಶತಮಾನದಲ್ಲಿ ಬಸವಣ್ಣನವರು ಪ್ರತಿಪಾದಿಸಿದ ತತ್ವ ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿವೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಶರಣಪ್ಪ ವಿ.ಹಲಸೆ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ಮುಕ್ತಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವೇಶ್ವರ ಜಯಂತಿ, ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾನ್ ಮಾನವತಾವಾದಿ, ಸಮಾಜ ಸುಧಾರಕ ಬಸವಣ್ಣನ ಕಾಯಕ, ಚಿಂತನೆ, ತತ್ವಾದರ್ಶಗಳು ಇಂದಿಗೂ ಸಮಾಜದ ಎಲ್ಲರಿಗೂ ಆದರ್ಶ ಹಾಗೂ ಅನುಕರಣೀಯ ಎಂದರು.
ಬಸವಣ್ಣ ಸಮಾಜದಲ್ಲಿ ಮೇಲುಕೀಳೆಂಬ ಭೇದ ಹೋಗಲಾಡಿಸಲು ಹಾಗೂ ಸ್ತ್ರೀ ಸಮಾನತೆಗಾಗಿ 12ನೇ ಶತಮಾನದಲ್ಲೇ ಕ್ರಾಂತಿಕಾರಕ ಬದಲಾವಣೆ ತರಲು ಶ್ರಮಿಸಿದರು. ಸಮಾಜ ಸುಧಾರಣೆಯ ಪರಿಕಲ್ಪನೆ ಹಾಗೂ ಸಿದ್ಧಾಂತಗಳನ್ನು ನಾವು ಅಳವಡಿಸಿಕೊಂಡು ಬಸವಣ್ಣನ ಕನಸನ್ನು ಸಾಕಾರಗೊಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಜನರಿಗೆ ಸುಲಭವಾಗಿ ಅರ್ಥವಾಗುವಂತೆ ವಚನಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಅನುಭವ ಮಂಟಪದ ಮೂಲಕ ವಿಶ್ವಧರ್ಮವನ್ನು ಸ್ಥಾಪಿಸಲು ಹೊರಟ ಬಸವಣ್ಣ ಅವರನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸಬಾರದು. ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಉದ್ಧಾರಕ್ಕೆ ಒತ್ತು ನೀಡಿದ ಬಸವಣ್ಣ ಎಲ್ಲ ವರ್ಗದವರಿಗೂ ಆದರ್ಶವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಬಸವ ಚಿಂತನೆಗಳ ಮಹತ್ವ ಮತ್ತು ಪ್ರಸ್ತುತತೆ ಕುರಿತು ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಉಪನ್ಯಾಸ ನೀಡಿದರು. ಕುಲಸಚಿವ ಡಾ.ಕೆ.ಎಲ್.ಎನ್.ಮೂರ್ತಿ, ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಆರ್.ಚಂದ್ರೇಗೌಡ ಇತರರು ಇದ್ದರು.