ಪ್ರಕಾಶ ಖಂಡ್ರೆ 
ಜಿಲ್ಲೆ

ಬಸವಣ್ಣನವರ ಕಂಚಿನ ಪ್ರತಿಮೆ ಸ್ಥಾಪಿಸಿ

ಭಾಲ್ಕಿ: ದಾಡಗಿ ಗ್ರಾಮದ ಮುಖ್ಯ ರಸ್ತೆಯ ಕ್ರಾಸ್‌ನಲ್ಲಿ ವಿಶ್ವಗುರು ಬಸವಣ್ಣನವರ ಪ್ರತಿಮೆ ವಿರೂಪಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಜತೆಗೆ ಅದೇ ಸ್ಥಳದಲ್ಲಿ ಬಸವಣ್ಣನವರ ಕಂಚಿನ ಪ್ರತಿಮೆ ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಒತ್ತಾಯಿಸಿದ್ದಾರೆ.

ವಿಶ್ವಗುರು ಬಸವೇಶ್ವರರ ಪ್ರತಿಮೆ ಭಗ್ನ ಮಾಡಿರುವುದು ಅಕ್ಷಮ್ಯ. ಇಡೀ ಮನುಕುಲಕ್ಕೆ ಮಾನವತೆಯ ಸಂದೇಶ ಸಾರಿದ, ಸಮ ಸಮಾಜದ ಪರಿಕಲ್ಪನೆಯನ್ನು ಕಟ್ಟಿಕೊಟ್ಟ ೧೨ನೇ ಶತಮಾನದ ಕ್ರಾಂತಿಪುರುಷ ಬಸವೇಶ್ವರರು ಜಗತ್ತಿಗೇ ಆದರ್ಶರಾಗಿದ್ದಾರೆ. ಇಂಗ್ಲೆಂಡ್‌ನಲ್ಲಿಯೂ ಬಸವಣ್ಣನವರ ಪ್ರತಿಮೆ ಸ್ಥಾಪಿಸಿ ಗೌರವಿಸಲಾಗಿದೆ. ಇಂತಹ ಮಹಾಮಹಿಮರ ಪ್ರತಿಮೆ ಭಗ್ನಗೊಳಿಸಿರುವುದು ನಿಜಕ್ಕೂ ದುರ್ದೈವ. ಪ್ರತಿಮೆ ವಿರೂಪಗೊಂಡು ಮೂರ್ನಾಲ್ಕು ದಿನ ಕಳೆದಿವೆ. ಆದರೂ ಕೂಡ ಇಲ್ಲಿಯವರೆಗೂ ಅಧಿಕಾರಿಗಳ ತಂಡ, ಪೊಲೀಸ್ ಇಲಾಖೆ ದುಷ್ಕರ್ಮಿಗಳನ್ನು ಬಂಧಿಸದಿರುವುದು ವಿಪರ್ಯಾಸ. ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಎಲ್ಲ ಮಹಾತ್ಮರ ಪ್ರತಿಮೆಗಳ ಬಳಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಕಾರ್ಯ ಆಗಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.