ಚಿತ್ರದುರ್ಗ: ಬಸವಣ್ಣನ ಎಲ್ಲ ಚಿಂತನೆಗಳಿಗೆ ಬೆನ್ನೆಲುಬಾಗಿ ನಿಂತು ಅವರ ವ್ಯಕ್ತಿತ್ವ ರೂಪಿಸುವಲ್ಲಿ ಅಕ್ಕ ನಾಗಲಾಂಬಿಕೆಯ ಪಾತ್ರ ಮಹತ್ವದಾಗಿತ್ತು ಎಂದು ವನಕಲ್ಲು ಮಠದ ಡಾ.ಬಸವ ರಮಾನಂದ ಸ್ವಾಮೀಜಿ ಹೇಳಿದರು.
ಮುರುಘಾಮಠದಲ್ಲಿ ಮಂಗಳವಾರ ವಚನಾಭಿಷೇಕ, ಮುರುಘಾ ಗುರುಪರಂಪರೆಯ ಸ್ವಾಮೀಜಿಗಳ ಜೀವನ ದರ್ಶನ ಹಾಗೂ ಅಕ್ಕ ನಾಗಲಾಂಬಿಕೆ ಅವರ ಜಯಂತಿ ಸಮ್ಮುಖ ವಹಿಸಿ ಮಾತನಾಡಿ, ಮಹಿಳೆಗೆ ಸ್ವಾತಂತ್ರ್ಯ ನೀಡದ ಸಮಾಜದಿಂದ ಏನೂ ಪ್ರಯೋಜನ ಎಂದು 8 ವರ್ಷದ ಬಾಲಕ ಉಪನಯನವನ್ನು ಧಿಕ್ಕರಿಸಿದ್ದಾಗ ಬಸವಣ್ಣ ಮನೆ ಬಿಡುವಂಥ ಸಂದರ್ಭದಲ್ಲಿ ಒಡಗೂಡಿ ಹೊರಟ ಅಕ್ಕ ನಾಗಲಾಂಬಿಕೆ ಬಸವಣ್ಣನನ್ನು ಜಗತ್ತಿಗೆ ಒಂದು ಹೊಸ ತತ್ತ್ವಸಿದ್ಧಾಂತವನ್ನು ನೀಡುವಷ್ಟರ ಮಟ್ಟಿಗೆ ಬೆಳೆಸಿದ್ದಳು ಎಂದರು.
ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ.ಶ್ರೀಬಸವಪ್ರಭು ಸ್ವಾಮೀಜಿ ಮಾತನಾಡಿ, ಅಕ್ಕ ನಾಗಮ್ಮನವರು ತನ್ನ ತಮ್ಮನಾದ ಬಸವಣ್ಣನನ್ನು ಬಾಲ್ಯದಿಂದ ಕಡೆಯ ಕಲ್ಯಾಣ ಕ್ರಾಂತಿಯವರೆಗೂ ಕೈಹಿಡಿದು ಮುನ್ನಡೆಸಿದರು. ಕಲ್ಯಾಣ ಕ್ರಾಂತಿಯಾಗಿದ್ದು, ಅಕ್ಕನಾಗಮ್ಮ ನವರ ಪ್ರೇರಣೆಯಿಂದಾಗಿ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಅಕ್ಕ ನಾಗಮ್ಮ ಮಹಿಳಾ ಕುಲಕ್ಕೆ ಮಾದರಿ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಜನ್ಮದಿನದ ಅಂಗವಾಗಿ ಡಾ.ಬಸವಪ್ರಭು ಸ್ವಾಮೀಜಿ ಅವರನ್ನು ಗೌರವಿಸಲಾಯಿತು.
ಅರಳೂರು ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಬಸವ ಮುರುಘೇಂದ್ರ ಶ್ರೀಗಳು, ಕಲ್ಕೆರೆಯ ಶ್ರೀ ಪೂರ್ಣಾನಂದರು, ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ್, ಉಪ ಅಧೀಕ್ಷಕ ಡಾ.ನಾಗೇಂದ್ರಗೌಡ, ವ್ಯವಸ್ಥಾಪಕ ಸತ್ಯನಾರಾಯಣ, ಬಸವರಾಜ ಕಟ್ಟಿ, ಬಸವಕುಮಾರ್, ಕೆಎಂಜಿ ಹಾಲಸ್ವಾಮಿ, ಆನಂದ ಪಾಟೀಲ್, ಪ್ರಶಾಂತಸ್ವಾಮಿ ಇತರರು ಇದ್ದರು.
ಜಮುರಾ ಕಲಾವಿದ ಉಮೇಶ ಸಂಗಪ್ಪ ಪ್ರಾರ್ಥಿಸಿದರು. ಹೇಮಲತಾ ಸ್ವಾಗತಿಸಿ, ಮಂಜುಳಾ ನಿರೂಪಿಸಿದರು. ಸಿದ್ಧಗಂಗಮ್ಮ ವಂದಿಸಿದರು.