ಚಿತ್ರದುರ್ಗ: ಮಾನವರ ಬುದ್ಧಿ, ಮನಸ್ಸು ಕ್ರಿಯಾಶೀಲವಾಗಿಸುವ, ಚೈತನ್ಯ ತುಂಬುವ ಅದ್ಭುತ ಶಕ್ತಿ ಬಸವಣ್ಣನ ಉದಾತ್ತ ಚಿಂತನೆಗಳಲ್ಲಿ ಅಡಗಿದೆ. ಅವರ ವಚನಗಳು ಮೌಲ್ಯ, ಆದರ್ಶ ಬಿತ್ತಲಿವೆ ಎಂದು ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಹೇಳಿದರು.
ಭೋವಿ ಗುರುಪೀಠದಲ್ಲಿ ಶುಕ್ರವಾರ ನಡೆದ ‘ಬಸವ’ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬಸವಣ್ಣನ ಬದುಕು ಸರಳ. ಸಾಮಾಜಿಕ-ಧಾರ್ಮಿಕ ಸುಧಾರಕರು. ಅವರ ತತ್ವಾದರ್ಶ ಎಲ್ಲರೂ ಅಳವಡಿಸಿಕೊಂಡರೆ, ಸಮಾಜದಲ್ಲಿ ಅಮೂಲಾಗ್ರ ಬದಲಾವಣೆ ಕಾಣಲು ಸಾಧ್ಯವಿದೆ ಎಂದರು.
ಡಾ.ಶಾಂತವೀರ ಶ್ರೀ ಮಾತನಾಡಿ, ಕನ್ನಡ ನಾಡಲ್ಲಿ 12ನೇ ಶತಮಾನದಲ್ಲಿ ಮಹಾಮಾನವತಾವಾದಿ ಬಸವೇಶ್ವರರು, ಅವರನ್ನು ಅನುಸರಿಸಿದ ಅಸಂಖ್ಯಾತ ಶಿವಶರಣರ ವಿಚಾರಧಾರೆಗಳು ಸಮಾಜ ಸುಧಾರಣೆಗೆ ಅತ್ಯಂತ ಶ್ರೇಷ್ಠ ಮಾರ್ಗ ಹಾಕಿಕೊಟ್ಟಿವೆ ಎಂದು ಹೇಳಿದರು.
ಶರಣ ತತ್ವವು ಬದುಕಿಗೆ ದಾರಿದೀಪವಾಗಿ ಮೆರುಗು ನೀಡುವ ಸಾಧನಾ ಮಾರ್ಗ. ಅದನ್ನು ಪ್ರಾಯೋಗಿಕವಾಗಿ ಕೈಗೊಂಡಾಗ ಮಾತ್ರ ಅನುಭವಕ್ಕೆ ಬರಲು ಸಾಧ್ಯ. ಅಂತರಂಗ ಶುದ್ಧಿ, ಧರ್ಮ ಮಾರ್ಗ, ನುಡಿದಂತೆ ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.
ಪುರುಷೋತ್ತಮಾನಂದಪುರಿ ಶ್ರೀ, ಈಶ್ವರಾನಂದಪುರಿ ಶ್ರೀ, ಶಿವಲಿಂಗಾನಂದ ಶ್ರೀ, ಮಾತಂಗಮುನಿ ಶ್ರೀ, ನಂದ ಮಸಂದ ಶ್ರೀ, ಬಸವ ಕೇತೇಶ್ವರ ಶ್ರೀ, ಮಹಾಲಿಂಗ ಶ್ರೀ, ಗಜದಂಡ ಶ್ರೀ, ಜಯದೇವ ಶ್ರೀ, ನಿರಂಜನಾನಂದ ಶ್ರೀ, ತಿಪ್ಪೇರುದ್ರ ಶ್ರೀ, ಪೂರ್ಣಾನಂದ ಶ್ರೀ, ಸತ್ಯಕ್ಕ, ಜಯದೇವಿ ತಾಯಿ ಇದ್ದರು.