ಭಾಲ್ಕಿ: ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಒತ್ತಾಯಿಸಿದ್ದಾರೆ.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಭಾನುವಾರ ಅರಣ್ಯ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿ ಅವರು, ವಿಶ್ವಗುರು ಬಸವಣ್ಣನವರು ಜಗತ್ತಿನ ಮಹಾನ ದಾರ್ಶನಿಕರ ಪರಂಪರೆಯಲ್ಲಿ ಅಗ್ರಗಣ್ಯರು. ಬಸವಣ್ಣನವರು ತಾವು ಒಬ್ಬರೇ ಶರಣರಾಗದೇ ಜತೆಗಿದ್ದವರನ್ನು ಉನ್ನತ ಸ್ಥಿತಿಗೆ ತಲುಪಿಸಿದ ಸರ್ವಶ್ರೇಷ್ಠ ನಾಯಕರು. ಅಂತ ಶ್ರೇಷ್ಠ ನಾಯಕ ನಮ್ಮ ನಾಡಿನಲ್ಲಿ ಜನಿಸಿದ್ದು, ಅಹೋಭಾಗ್ಯ. ಆದ್ದರಿಂದ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವುದು ಸೂಕ್ತ ಎಂದು ಮನವರಿಕೆ ಮಾಡಿದರು.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರೆ ನಮ್ಮ ರಾಜ್ಯದ ಹಿರಿಮೆ ಹೆಚ್ಚಲಿದ್ದು, ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಯೋಚಿಸಿ, ನಿರ್ಣಯ ತೆಗೆದುಕೊಳ್ಳಬೇಕು ಎಂದು ಮಠಾಧಿಪತಿಗಳ ಒಕ್ಕೂಟದಿಂದ ಒತ್ತಾಯಿಸಿದರು.
ಶ್ರೀ ಗುರುಬಸವ ಪಟ್ಟದ್ದೇವರು, ಕಾಂಗ್ರೆಸ್ ತಾಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ್, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ತಾಪಂ ಎಡಿ ಚಂದ್ರಶೇಖರ ಬನ್ನಾಳೆ, ಧನರಾಜ ಬಂಬುಳಗೆ ಇತರರಿದ್ದರು.