ಬಸವಕಲ್ಯಾಣ: ಉದ್ಯಾನಕ್ಕಾಗಿ ಮೀಸಲಿಟ್ಟ ನಿವೇಶನದಲ್ಲಿ ಅಕ್ರಮವಾಗಿ ನಿರ್ಮಿಸಲಾಗುತ್ತಿದ್ದ ಕಟ್ಟಡವನ್ನು ಪೊಲೀಸ್ ಇಲಾಖೆ ಸಹಕಾರದೊಂದಿಗೆ ನಗರಸಭೆ ಅಧಿಕಾರಿಗಳು ಜೆಸಿಬಿ ಮೂಲಕ ಮಿಂಚಿನ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿ ಬಿಸಿ ಮುಟ್ಟಿಸಿದರು.
ಸಸ್ತಾಪುರ ಬಂಗ್ಲಾ ಸಮೀಪದ ಆಟೋ ನಗರದಲ್ಲಿ ಸರ್ವೇ ನಂ.೧೧೫/೨ ರಲ್ಲಿ ಬಡಾವಣೆಯಲ್ಲಿ ಉದ್ಯಾನ ವನದ ಸ್ಥಳದಲ್ಲಿ ಮಳಿಗೆ ನಿರ್ಮಾಣ ಮಾಡಲಾಗುತ್ತಿತ್ತು. ಸೋಮವಾರ ಬೆಳಗ್ಗೆ ನಗರಸಭೆ ಪೌರಾಯುಕ್ತ ರಾಜು ಡಿ.ಬಣಕಾರ ನೇತೃತ್ವದಲ್ಲಿ ಜೆಸಿಬಿ, ಟ್ರ್ಯಾಕ್ಟರ್‌ನೊಂದಿಗೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡವನ್ನು ತೆರವುಗೊಳಿಸಿದರು. ಮುಂಜಾಗೃತಾ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಸಿಪಿಐ ಅಲಿಸಾಬ್ ಹಾಗೂ ಪಿಎಸ್‌ಐ ಅಂಬ್ರೀಷ್ ವಾಗ್ಮೋಡೆ ಸ್ಥಳದಲ್ಲಿದ್ದು ಅವಲೋಕನ ಮಾಡಿದರು.
ತೆರವು ಕಾರ್ಯಾಚರಣೆ ಸ್ಥಳಕ್ಕೆ ಆಗಮಿಸಿದ ಶಾಸಕ ಶರಣು ಸಲಗರ, ಸರ್ಕಾರಿ ಸ್ಥಳದಲ್ಲಿ ಅಕ್ರಮ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಅಕ್ರಮವಾಗಿ ನಿರ್ಮಿಸುತ್ತಿರುವ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆಯ ಕಂದಾಯ ಅಧಿಕಾರಿ ಸುನೀಲಕುಮಾರ, ಎಇಇ ವಾಜೀದ್, ಪರಿಸರ ಅಭಿಯಂತರ ಮನೋಜಕುಮಾರ, ಆರೋಗ್ಯ ನಿರೀಕ್ಷಕ ನಿತ್ಯಾನಂದ ಇತರರಿದ್ದರು.
ಫಲಕ ಅಳವಡಿಕೆ: ಬೆಳಗ್ಗೆ ೭ರಿಂದ ಸಂಜೆವರೆಗೂ ಕಾರ್ಯಾಚರಣೆ ಮುಂದುವರೆಸಿ ಅಕ್ರಮ ಕಟ್ಟಡವನ್ನು ತೆರವುಗೊಳಿಸಿ ಫಲಕ ಅಳವಡಿಸಲಾಯಿತು.
ಪ್ರಕರಣ: ಕಟ್ಟದ ತೆರವುಗೊಳಿಸಲು ಶನಿವಾರ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಹೋದಾಗ ತೆರವು ಕಾರ್ಯಕ್ಕೆ ತಡೆವೊಡ್ಡಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ ಅಬ್ದುಲ್ ರಝಾಕ್ ಸೇರಿ ಮೂವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದರೆ ನೆಲಸಮ: ನಗರದ ಆಟೋ ನಗರದಲ್ಲಿ ಗಾರ್ಡ್ನ್ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿದ್ದ ಕಟ್ಟಡ ನೆಲ ಸಮ ಗೊಳಿಸಲಾಗುತ್ತಿದೆ. ನಗರದಲ್ಲಿ ಯಾರೇ ಆಗಲಿ, ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದರೆ ಇದೇ ಪರಿಸ್ಥಿತಿ ಆಗಲಿದೆ ಎಂದು ಶಾಸಕ ಶರಣು ಸಲಗರ ಎಚ್ಚರಿಸಿದ್ದಾರೆ.
ನಗರದ ಆಟೋ ನಗರದ ಸರ್ವೇ ನಂ. ೧೧೫/೨ರಲ್ಲಿ ಗಾರ್ಡ್ನ ಜಾಗದಲ್ಲಿ ಸುಮಾರು ೨೦ ಅಂಗಡಿಗಳನ್ನು ಅನಧಿಕೃತವಾಗಿ ನಿರ್ಮಿಸಲಾಗುತ್ತಿತ್ತು. ನಗರಸಭೆ ಅಧಿಕಾರಿ, ಪೊಲೀಸ್ ಅಧಿಕಾರಿಗಳ ಸಹಯೋಗದೊಂದಿಗೆ ತೆರವುಗೊಳಿಸುತ್ತಿದ್ದಾರೆ. ಅನಧಿಕೃತ ಕಟ್ಟಡ ನಿರ್ಮಾಣ ತೆರವು ಮಾಡಿಸಲು ಆರಂಭಿಸಿದ್ದೇವೆ. ಇಂದು ಸುಮಾರು ೫ ಕೋಟಿ ರೂ. ಮೌಲ್ಯದ ಸರ್ಕಾರದ ಸ್ಥಳವನ್ನು ಕಾಪಾಡುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಜನರು ಮನೆ, ಅಂಗಡಿ ನಿರ್ಮಿಸಲು ಜಾಗ ಖರೀದಿಸಬೇಕಾದರೆ ಸಿಸಿ, ಪಹಣಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಸರ್ಕಾರ ಇದೆ, ನಮ್ಮರಿದ್ದಾರೆ, ನಮ್ಮ ಹಿಂದೆ ಲೀಡರ್ ಇದ್ದಾರೆ ಎಂದು ಕೆಲವರು ಸರ್ಕಾರದ ಜಾಗವನ್ನು ಕಬ್ಜಾ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಸರ್ಕಾರಿ ಜಾಗ ಕಬ್ಜಾ ಮಾಡಿದರೆ ತೆರವುಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.