ಬೆಂಗಳೂರು: ಬಿಜೆಪಿ ನೆಲೆಯೇ ಇಲ್ಲದ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ರಣತಂತ್ರ ರೂಪಿಸುವಲ್ಲಿ ಎತ್ತಿದ ಕೈ ಎನಿಸಿಕೊಳ್ಳುತ್ತಿರುವ ಪಕ್ಷ ದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಅವರ ತಂಡ ಈಗ ಮುಂಬರುವ ಬಸವಕಲ್ಯಾಣ ಉಪ ಚುನಾವಣೆ ಮೇಲೆ ಚಿತ್ತೈಸಿದೆ.
ಕರೊನಾದಿಂದ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಮೃತರಾದ ಹಿನ್ನೆಲೆ ಬಸವಕಲ್ಯಾಣ ಕ್ಷೇತ್ರಕ್ಕೆ ಶೀಘ್ರವೇ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು, ಬಿಜೆಪಿ ಈ ಕ್ಷೇತ್ರದಲ್ಲಿ ಗೆಲ್ಲುವ ಆಶಾಭಾವನೆಯೊಂದಿಗೆ ತಯಾರಿ ನಡೆಸಿದೆ. ಹಳೇ ಮೈಸೂರು ಭಾಗದ ಕೆ.ಆರ್.ಪೇಟೆಯಲ್ಲಿ ನಾರಾಯಣ ಗೌಡರನ್ನು ಗೆಲ್ಲಿಸಿದ, ಮಧ್ಯಕರ್ನಾಟಕದಲ್ಲಿ ಶಿರಾದಲ್ಲಿ ಎದುರಾಳಿಗಳು ಬಸವಳಿಯುವಂತೆ ಮಾಡಿದ ಬಿ.ವೈ.ವಿಜಯೇಂದ್ರ ಮುಂದೆ ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿಯೂ ತಮ್ಮ ತಂತ್ರಗಾರಿಕೆ ಯಾತ್ರೆ ಮುಂದುವರಿಸಬೇಕೆಂದು ಪಕ್ಷ ಬಯಸಿದೆ.
ಈ ಹಿನ್ನೆಲೆಯಲ್ಲಿ ಅವರು ನವೆಂಬರ್ 12ರಂದು ಬಸವ ಕಲ್ಯಾಣಕ್ಕೆ ತೆರಳುತ್ತಿದ್ದಾರೆ. ಜತೆಗೆ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶ್ ಗೌಡ ಕೂಡ ಇರಲಿದ್ದಾರೆ. ಪಕ್ಷದ ಮುಖಂಡರ ಸಭೆ, ಕಾರ್ಯಕರ್ತರೊಂದಿಗೆ ಸಮಾಲೋಚನೆ ಹಾಗೂ ವಿವಿಧ ಮಠಗಳಿಗೆ ಭೇಟಿಕೊಡುವರು. ಮಲ್ಲಿಕಾರ್ಜುನಪ್ಪ ಸಿದ್ದರಾಮಯ್ಯ ಖೂಬಾ ಅವರು 2013ರಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದ ಕ್ಷೇತ್ರದಲ್ಲಿ ಅವರು 2018ರಲ್ಲು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಖೂಬಾ ಅವರಿಗೆ ಮೂರನೇ ಚುನಾವಣೆ. ಸದ್ಯ ನಾಲ್ವರು ಆಕಾಂಕ್ಷಿಗಳಿದ್ದಾರೆ. ವಿಜಯೇಂದ್ರ ಅವರ ಬಸವ ಕಲ್ಯಾಣದಿಂದ ಕಣಕ್ಕಿಳಿಯುವುದಿಲ್ಲ ಎಂಬುದೂ ನಿಶ್ಚಯವಾಗಿದೆ.