ಬಸವಕಲ್ಯಾಣ: ಬಸವಣ್ಣನವರ ಕಾಯಕ ಭೂಮಿ ಕಲ್ಯಾಣದಲ್ಲಿ ೨೦೨೭ರ ಡಿಸೆಂಬರ್ ೨೩ರಿಂದ ೨೭ರ ವರೆಗೆ ಬಸವ ಭಾರತ ಉತ್ಸವ ಆಯೋಜಿಸಾಗುತ್ತಿದೆ. ಮಾನವೀಯ ಮೌಲ್ಯ, ಬಹುತ್ವ ಭಾರತದ ಉತ್ಸವ, ಜಾಗತಿಕ ಸೌಹಾರ್ದತೆ ಬೆಸೆಯುವ ಉತ್ಸವ ಇದಾಗಲಿದ್ದು, ಐದು ದಿನಗಳ ಉತ್ಸವದಲ್ಲಿ ಕನಿಷ್ಠ ಐದು ಲಕ್ಷಕ್ಕೂ ಹೆಚ್ಚು ಜನರು ಇಲ್ಲಿಗೆ ಬರಲಿದ್ದಾರೆ ಎಂದು ಕ್ಷೇತ್ರ ಸಮಿತಿ ಮುಖ್ಯ ಸಂಚಾಲಕರೂ ಆದ ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಹೇಳಿದರು.
ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಬಸವ ಭಾರತ ಉತ್ಸವ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನ ಜನರನ್ನು ಕಲ್ಯಾಣಕ್ಕೆ ಸ್ವಾಗತಿಸಿ, ಒಗ್ಗೂಡಿಸುವ ವೇದಿಕೆಯೇ ಬಸವ ಭಾರತ ಉತ್ಸವ. ರಾಷ್ಟç, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಸವ ಪ್ರಜ್ಞೆ ಬಿತ್ತಿ, ಶಾಂತಿ, ಸಹಬಾಳ್ವೆ ಹಾಗೂ ಸೌಹಾರ್ದತೆ ಮೌಲ್ಯಗಳ ಚಿಂತನ-ಮAಥನ ಮಾಡಿ, ಬಸವ ಭಾರತ ಕಟ್ಟುವ ಮೊದಲ ಹೆಜ್ಜೆ ಇದಾಗಿದೆ ಎಂದು ಕಾರ್ಯಕ್ರಮ ಆಶಯವನ್ನು ತೆರೆದಿಟ್ಟರು.
ಕ್ಷೇತ್ರ ಸಮಿತಿಯ ಕಾರ್ಯ ಯೋಜನೆಗೆ ೨೦೨೭ರಲ್ಲಿ ಐದು ವರ್ಷ ತುಂಬಲಿದೆ. ಹೀಗಾಗಿ ಐದು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದು ಯಶಸ್ವಿ ಆಗಬೇಕಾದರೆ ಸಂಘ-ಸಂಸ್ಥೆಗಳ ಪಾತ್ರ ದೊಡ್ಡದಿದೆ. ಇಲ್ಲಿಯ ಶ್ರೀ ಬಸವೇಶ್ವರ ದೇವಸ್ಥಾನ ಮಂಡಳಿ, ಬಿಕೆಡಿಬಿ ಹಾಗೂ ನಗರಸಭೆ ಪಾತ್ರ ಅಪಾರ. ಈ ಮೂವರಿಗೆ ಸಹಕಾರಿಯಾಗಿ ಬರುವ ಯಾತ್ರಿಕರಿಗೆ ಮತ್ತೆ ಕಲ್ಯಾಣಕ್ಕೆ ಬರಬೇಕು ಎನಿಸುವಂಥ ವಾತಾವರಣ ಕಲ್ಪಿಸಲು ನಾವು ಸಣ್ಣ ಪ್ರಯತ್ನ ಆರಂಭಿಸಿದ್ದೇವೆ ಎಂದರು.
ಕಲ್ಯಾಣಕ್ಕೆ ಬರುವ ಯಾತ್ರಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ನಿತ್ಯ ಐದು ಸಾವಿರ ಜನ ಯಾತ್ರಿಕರು ಕಲ್ಯಾಣಕ್ಕೆ ಭೇಟಿ ನೀಡಬೇಕು ಎನ್ನುವ ಆಸೆ ಇದೆ. ಆದರೆ ಬರುವ ಯಾತ್ರಿಗಳಲ್ಲಿ ಶೇ.೯೫ರಷ್ಟು ಜನ ಬೆಳಗ್ಗೆ ಬಂದು ಸಂಜೆ ಹೋಗುತ್ತಾರೆ. ಯಾತ್ರೆ ಸ್ಥಳಕ್ಕೆ ಮಹತ್ವ ಬರುವುದು ಯಾತ್ರಿಗಳು ಒಂದು ದಿನವಾದರೂ ಇಲ್ಲಿ ಉಳಿಯಬೇಕು. ಅಂದಾಗ ಇಲ್ಲಿಯ ಉದ್ಯಮ, ವ್ಯಾಪಾರ ಬೆಳೆಯುತ್ತದೆ. ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಹುಲಸೂರು, ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು, ಹರಳಯ್ಯನವರ ಗವಿಯ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಮಾತನಾಡಿದರು. ಬೇಲೂರನ ಶ್ರೀ ಪಂಚಾಕ್ಷರಿ ಸ್ವಾಮಿ, ಸಾಯಗಾಂವನ ಶ್ರೀ ಶಿವಾನಂದ ಸ್ವಾಮಿ ಸಮ್ಮುಖ ವಹಿಸಿದ್ದರು. ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಡಾ.ಅಮರನಾಥ ಸೋಲಪುರೆ, ಶಂಕ್ರೆಪ್ಪ ಪಾಟೀಲ್, ಡಾ.ದೇವಿಕಾ ನಾಗೂರೆ, ಸೂರ್ಯಕಾಂತ ಮಠ, ಪಂಡಿತ ಬಸವರಾಜ, ಮಲ್ಲಿಕಾರ್ಜುನ ಆಲಗೂಡೆ ಇತರರಿದ್ದರು. ಚನ್ನಬಸವ ಬಳತೆ ಸ್ವಾಗತಿಸಿದರು. ಡಾ.ಮಹೇಶ ಪಾಟೀಲ್ ನಿರೂಪಣೆ ಮಾಡಿದರು.
ಮೊದಲ ದಿನದ ದಾಸೋಹ ವಹಿಸಿಕೊಂಡ ಹುಲಸೂರ ಶ್ರೀ: ಬಸವಕಲ್ಯಾಣದಲ್ಲಿ ೨೦೨೭ರಲ್ಲಿ ನಡೆಸಲು ಉದ್ದೇಶಿದ ಬಸವ ಭಾರತ ಉತ್ಸವದಲ್ಲಿ ಮೊದಲ ಒಂದು ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಸವ ಭಕ್ತರಿಗಾಗಿ ದಾಸೋಹ ವ್ಯವಸ್ಥೆಯನ್ನು ತಾವು ವಹಿಸಿಕೊಳ್ಳುವದಾಗಿ ಹುಲಸೂರು ಗುರು ಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಹೇಳಿದರು. ಬಸವಾದಿ ಶರಣರ ಉತ್ಸವ ಮಾಡುವದು ಜಗತ್ತಿನ ಉತ್ಸವ ಮಾಡಿದಂತೆ. ಕಲ್ಯಾಣಕ್ಕೆ ಪ್ರತಿ ದಿನ ಐದು ಸಾವಿರ ಜನ ಯಾತ್ರಾರ್ಥಿಗಳು ಬರಬೇಕು ಎನ್ನುವುದು ಸೇಡಂ ಅವರ ಆಶಯವಾಗಿದೆ. ಅವರ ಕನಸು ನನಸಾಗಿಸಲು ನಾವೆಲ್ಲರೂ ಕೈಜೋಡಿಸೋಣ ಎಂದರು.
ಈ ನೆಲದ ತತ್ವ ಜಗತ್ತಿಗೆ ತಲುಪಬೇಕು ಎನುವುದೇ ಬಸವ ಭಾರತ ಉತ್ಸವದ ಆಶಯವಾಗಿದೆ. ಜಗತ್ತಿನ ಜನ ಕಲ್ಯಾಣಕ್ಕೆ ಬರಬೇಕು. ಜಗತ್ತಿಗೆ ಬಸವ ತತ್ವ ಪರಿಚಯಿಸಬೇಕು. ಈ ಮೂಲಕ ಜಾಗತಿಕ ಮಟ್ದಲ್ಲಿ ಶಾಂತಿ ನೆಲಸಬೇಕು ಎನ್ನುವುದೇ ಕಾರ್ಯಕ್ರಮದ ಹಿಂದಿನ ಉದ್ದೇಶ.
| ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಹರಳಯ್ಯನವರ ಗವಿ
ಬಸವಣ್ಣನವರ ಜನಪರ, ಜೀವ ಪರ ಕಾರ್ಯದಿಂದಾಗಿ ಇಡೀ ಪ್ರಪಂಚ ಕಲ್ಯಾಣ ಕಡೆ ನೋಡುತ್ತಿದೆ. ಅವರ ವಿಚಾರ ಅನೇಕ ರಾಜ್ಯಗಳು, ದೇಶಗಳು ಅಳವಡಿಸಿಕೊಳ್ಳುತ್ತಿವೆ. ಕಲ್ಯಾಣಕ್ಕೆ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎನ್ನುವ ಆಶಯದೊಂದಿಗೆ ಬಸವಕಲ್ಯಾಣ ಕ್ಷೇತ್ರ ಸಮಿತಿಯಿಂದ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ. ೨೦೨೭ರಲ್ಲಿ ಆಯೋಜಿಸಿದ ಉತ್ಸವದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಬೇಕು.
| ಶ್ರೀ ಗುರುಬಸವ ಪಟ್ಟದ್ದೇವರು ಭಾಲ್ಕಿ ಹಿರೇಮಠ ಸಂಸ್ಥಾನ