ಬಸವಕಲ್ಯಾಣ: ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ, ಸಾಮಾಜಿಕ ಸಾಮರಸ್ಯ ಕಂಡ ಈ ನೆಲವು ಐತಿಹಾಸಿಕ ಪ್ರೇಕ್ಷಣಿಯ ಸ್ಥಳವಾಗಿದೆ. ಈ ನೆಲಕ್ಕೆ ಮತ್ತಷ್ಟು ಗೌರವ ಸಮರ್ಪಣೆ ಸಲ್ಲಬೇಕು ಎನ್ನುವ ಮನೋಭಾವ ಸರ್ಕಾರಕ್ಕೆ ಇದ್ದರೆ ಬಸವಕಲ್ಯಾಣವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲಿ ಎಂದು ಗುಲ್ಬರ್ಗ ವಿವಿ ಗೌರವ ಡಾಕ್ಟರೆಟ್ ಪುರಸ್ಕೃತರಾದ ಚಿಂತಕ ಡಾ.ತಾತ್ಯಾರಾವ ಕಾಂಬಳೆ ಹೇಳಿದರು.
ಅಂತಾರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಿಂದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶ, ವರ್ತಮಾನದ ಅವಶ್ಯಕತೆ ಪರಿಸರ ಸಂರಕ್ಷಣೆ, ಶರಣರ ವಿಚಾರಧಾರೆ ಕುರಿತು ಚಿಂತನೆ, ಸಸಿ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಬುದ್ಧವುಳ್ಳ ಸರ್ಕಾರ ಮಾತ್ರ ಜಿಲ್ಲಾ ಕೇಂದ್ರದ ಮಾಡುವ ಮಹತ್ವದ ಐತಿಹಾಸಿಕ ನಿರ್ಧಾರ ಕೈಗೊಂಡು ಘೋಷಿಸುತ್ತದೆ. ಬಸವಕಲ್ಯಾಣ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸದಿದ್ದಲ್ಲಿ ಅಂತ ಸರ್ಕಾರಕ್ಕೆ ಉಗ್ರ ಹೋರಾಟ ಮಾಡಿ, ಬಿಸಿ ಮುಟ್ಟಿಸಲು ಸಜ್ಜಾಗಬೇಕು ಎಂದು ಮನವಿ ಮಾಡಿದರು.
ಹರಳಯ್ಯ ಗವಿಯ ಪೂಜ್ಯ ಡಾ.ಗಂಗಾಂಬಿಕ ಅಕ್ಕ ಮಾತನಾಡಿ, ಪರಿಸರವನ್ನು ನಾಶ ಮಾಡುವುದೆಂದರೆ ಮನುಷ್ಯ ಮತ್ತು ಆತನ ಪರಮಾತ್ಮನನ್ನು ನಾಶ ಮಾಡಿದಂತೆ. ಶರಣರು ಮನುಷ್ಯ ಆತನ ಪರಮಾತ್ಮ ಹಾಗೂ ಪರಿಸರ ಈ ಮೂರರಲ್ಲಿ ಐಕ್ಯಕಂಡಿದ್ದಾರೆ ಎಂದರು.
ಬೀದರ್ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಶಿವಶರಣಪ್ಪ ಹುಗ್ಗೆ ಪಾಟೀಲ್ ಮಾತನಾಡಿ, ಬದಲಾಗುತ್ತಿರುವ ಮನುಷ್ಯನ ಜೀವನ ಶೈಲಿಯಿಂದ ಪರಿಸರ ನಾಶವಾಗುತ್ತಿದೆ. ತ್ಯಾಜ್ಯವಸ್ತುಗಳನ್ನು ಮರುಬಳಕೆ ಮಾಡಬೇಕು ಎಂದರು.
ಬಿಡಿಪಿಸಿ ನಿರ್ದೇಶಕ ವೀರಣ್ಣ ಹಲಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೀದರ್ ಪರಿಸರ ವಾಹಿನಿಯ ಶೈಲೇಂದ್ರ ಕಾವಡಿ ಸಸಿ ವಿತರಿಸಿದರು. ತೆಲಂಗಾಣದ ಮಾಜಿ ಶಾಸಕ ಮಧುಸೂದನ್, ಪ್ರಗತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಗೌರಿಶಂಕರ ದಾಬಕೆ, ನೂಲಿಯ ಚಂದಯ್ಯ ಸಮಾಜದ ಮುಖಂಡ ರವಿ ಉಪಸ್ಥಿತರಿದ್ದರು. ಪ್ರವೀಣ ಜಾಧವ್ ಧ್ವಜಾರೋಹಣ ನೆರವೇರಿಸಿದರು. ಇರಾ ಪ್ರಾಥಮಿಕ ಶಾಲೆ ಮಕ್ಕಳಿಂದ ನಡೆದ ಪರಿಸರಗೀತೆ ನೃತ್ಯರೂಪಕ ಗಮನ ಸೆಳೆಯಿತು.
ಸಂಗಮೇಶ ತೋಗರಖೇಡೆ ನಿರೂಪಣೆ ಮಾಡಿದರು. ರಂಜನಾ ಬೂಶೆಟ್ಟಿ ಮತ್ತು ಸಂಗಡಿಗರು ವಚನ ಗಾಯನ ನಡೆಸಿಕೊಟ್ಟರು. ಅಕ್ಕನ ಬಳಗದಿಂದ ವಚನ ಪ್ರಾರ್ಥನೆ, ಮಹಾಶಕ್ತಿಕೂಟ ಮಡಿವಾಳ ಮಾಚಿದೇವ ಬಳಗದಿಂದ ಗುರುಪೂಜೆ ನಡೆಯಿತು. ಜಗದೇವಿ ಜವಳಗಿ ಸ್ವಾಗತಿಸಿದರು. ಸುನಿತಾ ಬಸತೀರ್ಥಪ್ಪ ಪಾಟೀಲ್ ದಾಸೋಹ ವ್ಯವಸ್ಥೆ ಮಾಡಿದ್ದರು.
ಸತ್ಕಾರ: ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗೆ ಭಾಜನರಾದ ಸಾಮಾಜಿಕ ಹೋರಾಟಗಾರ, ಸಾಹಿತಿ, ಚಿಂತಕ ಡಾ.ತಾತ್ಯಾರಾವ ಕಾಂಬಳೆ ಅವರನ್ನು ಸತ್ಕರಿಸಿದರು.