ಜಿಲ್ಲೆ

ಬಸವ ಮೂರ್ತಿ ಕೂಡಿಸಲು ನಾನು ಕಾರಣ

ಬಾಗಲಕೋಟೆ: ಹಿಂದೆ ಮಾತೆ ಮಹಾದೇವಿ ಅವರು ಬಸವಣ್ಣನ ಅಂಕಿತ ನಾಮ ತಿದ್ದಿದ್ದರಲ್ಲ. ಅವರಿಗೆ ಯಾರು ಅವಕಾಶ ಕೊಟ್ಟಿದ್ದರು? ಈಗ ನನ್ನ ಬಗ್ಗೆ ಮಾತನಾಡುತ್ತಾರಾ? ವಿಜಯಪುರದಲ್ಲಿ ಬಸವಣ್ಣನ ಮೂರ್ತಿ ನಿರ್ವಹಣೆ ಮಾಡುತ್ತಿರುವುದೇ ನಾನು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಜಿಲ್ಲೆಯ ಬನಹಟ್ಟಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದೆ ಕೇಂದ್ರದಲ್ಲಿ ಮಂತ್ರಿ ಇದ್ದಾಗ ಪಾರ್ಲಿಮೆಂಟ್‌ನಲ್ಲಿ ಬಸವಣ್ಣನ ಮೂರ್ತಿ ಕೂಡಿಸಲು ಕಾರಣವೇ ನಾನು. ಆಗ ಶರಣಬಸಪ್ಪ ಅಪ್ಪ ಅವರು ಮೂರ್ತಿ ಕೊಟ್ಟಿದ್ದರು. ಅಂದು ಪ್ರಧಾನಿ ವಾಜಪೇಯಿ ಅವರಿಂದ ಮೂರ್ತಿ ಉದ್ಘಾಟನೆ ಮಾಡಿಸಿದ್ದೆ. ಹೀಗಾಗಿ ನನ್ನ ವಿರುದ್ಧ ಮಾತನಾಡುವವರಿಗೆ ಬಸವಣ್ಣನ ಬಗ್ಗೆ ಮಾತನಾಡಲು ನೈತಿಕತೆಯೇ ಇಲ್ಲ ಎಂದ ಯತ್ನಾಳ್, ವಿಭೂತಿ ಹಚ್ಚಿಕೊಂಡು ಓಡಾಡುವವರು ಬಸವಣ್ಣನಿಗೆ ಏನು ಮಾಡಿದ್ದಾರೆಂದು ಹೇಳಲಿ ಎಂದು ತಮ್ಮ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳಿಗೆ ತಿರುಗೇಟು ಕೊಟ್ಟರು.

ಬಸವಣ್ಣನ ವಿಚಾರವಾಗಿ ಅಖಿಲ ಭಾರತ ವೀರಶೈವ ಮಹಾಸಭಾ ವಿರುದ್ಧವೂ ಕೆಂಡ ಕಾರಿದ ಯತ್ನಾಳ್, ಮಹಾಸಭಾದವರು ಬಸವಣ್ಣನಿಗೆ ಏನು ಮಾಡಿದೆ? ಮಹಾಸಭಾ ಹೆಸರಿನಲ್ಲಿ ಲಿಂಗಾಯತ ಎಂದು ಇಲ್ಲ. ಮಹಾಸಭಾದಲ್ಲಿ ಬಸವಣ್ಣನ ವಿಚಾರಧಾರೆಗಳೆ ಇಲ್ಲ. ಅವರಿಗೆ ಮಾತನಾಡಲು ಏನು ನೈತಿಕತೆ ಇದೆ. ವೀರಶೈವ ಮಹಾಸಭಾ ಎಂದರೆ ಬಿಎಸ್‌ವೈ. ಬರೀ ಮೂರು ಕುಟುಂಬಗಳಿಗೆ ಸೇರಿದ್ದು. ಬಿ- ಭೀಮಣ್ಣ ಖಂಡ್ರೆ, ಎಸ್-ಶಾಮನೂರ ಶಿವಶಂಕ್ರಪ್ಪ, ವೈ-ಯಡಿಯೂರಪ್ಪ ಈ ಮೂರು ಕುಟುಂಬಗಳೇ ವೀರಶೈವ ಮಹಾಸಭಾ ಎಂದು ಗೇಲಿ ಮಾಡಿದ ಯತ್ನಾಳ್, ಮೊದಲು ಅನುಭವ ಮಂಪಟ ಇವತ್ತು ಫೀರಭಾಷಾ ದರ್ಗಾ ಆಗಿದೆ. ಬಸವಣ್ಣನ ಹೆಸರಿನಲ್ಲಿ ಉಪಜೀವನ ಮಾಡುವವರು ಮೊದಲು ಆ ಹೋರಾಟಕ್ಕೆ ಇಳಿಯಲಿ ಎಂದು ಸವಾಲ್ ಹಾಕಿದರು.

ಯತ್ನಾಳ ಅವರು ಬಸವಣ್ಣನ ಕುರಿತ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ ಯತ್ನಾಳ್, ರಜಾಕರು ಮುಸ್ಲಿಂರು ಅಲ್ಲ ಎನ್ನುತ್ತಾರೆ. ಈ ದೇಶದ ಇತಿಹಾಸವನ್ನು ಕಮ್ಯುನಿಷ್ಟರು, ಕಾಮ್ರೆಡ್‌ಗಳು ತಮಗೆ ಬೇಕಾದಂತೆ ತಿದ್ದಿದ್ದಾರೆ. ಅವೆಲ್ಲ ಫೇಡ್ ಗಿರಾಕಿಗಳು. ಬುದ್ದಿಜೀವಿಗಳು, ಸಾಹಿತಿಗಳು ಡಾ.ಅಂಬೇಡ್ಕರ್ ವಿಚಾರ ಈ ದೇಶದ ಮುಂದೆ ಇಟ್ಟಿದ್ದಾರಾ? ಅಂಬೇಡ್ಕರ್ ಅವರು ಪಾಕಿಸ್ತಾನ ಒಡೆಯುವಾಗ ಏನು ಹೇಳಿದ್ದರು? ಈ ಬಗ್ಗೆ ದಮ್ ಇದ್ದರೆ ಪಿಯಾಂಕ್ ಖರ್ಗೆ ಚರ್ಚೆಗೆ ಬರಲಿ. ಮುಸ್ಲಿಂರ ಬಗ್ಗೆ ಅಂಬೇಡ್ಕರ್ ಅವರು ಏನು ಹೇಳಿದ್ದರು ಎಂದು ನಾನು ಹೇಳುತ್ತೇನೆ ಎಂದು ಆವ್ಹಾನ ನೀಡಿದರು.