ಜಿಲ್ಲೆ

ಬಸವ ಭವನ ನಿರ್ಮಾಣಕ್ಕೆ ಏಕೆ ನಿವೇಶನ ಕೊಡಲ್ಲ

ತಿ.ನರಸೀಪುರ: ಸಣ್ಣಪುಟ್ಟ ಸಮಾಜಗಳಿಗೂ ಸಮುದಾಯ ಭವನಗಳಿವೆ. ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತ ಸಮುದಾಯಕ್ಕೆ ಭವನವೂ ಇಲ್ಲ, ನಿವೇಶನವೂ ಇಲ್ಲ. ತಾಲೂಕಿನ ವೀರಶೈವ ಲಿಂಗಾಯತರು ನನ್ನೊಡನೆ ಒಗ್ಗಟ್ಟಿನಿಂದ ಬನ್ನಿ. ಅದೇಕೆ ಬಸವ ಭವನ ನಿರ್ಮಾಣಕ್ಕೆ ನಮಗೆ ನಿವೇಶನ ಕೊಡೋದಿಲ್ಲ, ನೋಡೇ ಬಿಡ್ತೀನಿ ಎಂದು ವಾಟಾಳು ಮಠದ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಜೆಎಸ್‌ಎಸ್ ಸಭಾಭವನದಲ್ಲಿ ಮಂಗಳವಾರ ವೀರಶೈವ ವಿದ್ಯಾರ್ಥಿನಿಲಯ ನವೀಕರಣದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಪ್ರಬಲ ಸಮುದಾಯವೊಂದಕ್ಕೆ ಇನ್ನೂ ಭವನ ನಿರ್ಮಾಣಕ್ಕೆ ನಿವೇಶನ ಮತ್ತು ಅನುದಾನ ಕೊಡಲ್ಲವೆಂದರೆ ಏನರ್ಥ? ನೀವೆಲ್ಲರೂ ಒಗ್ಗೂಡಿ ನನಗೆ ಬಲ ಕೊಡಿ. ನಾನೇ ಖುದ್ದಾಗಿ ನಿವೇಶನ ಮತ್ತು ಅನುದಾನ ಮಂಜೂರು ಮಾಡಿಸುತ್ತೇನೆ. ಎಲ್ಲದಕ್ಕೂ ಮೊದಲು ಸಮುದಾಯ ಒಗ್ಗಟ್ಟಾಗಬೇಕು. ಒಗ್ಗೂಡದಿದ್ದರೆ ಸಮುದಾಯದ ಬೇಡಿಕೆ ಈಡೇರದು ಎಂದರು.

ಭವನ ನಿರ್ಮಾಣಕ್ಕೆ ಕ್ಷೇತ್ರದ ಶಾಸಕರು ಆಗಿರುವ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅನುದಾನ ಮಂಜೂರು ಮಾಡುವ ಭರವಸೆ ನೀಡಿ, ನಿವೇಶನ ಹುಡುಕಿ ಕೊಡುವಂತೆ ಸಮುದಾಯಕ್ಕೆ ಸೂಚಿಸಿದ್ದರು. ನಾವೆಷ್ಟು ಹುಡುಕಾಡಿದರೂ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸೂಕ್ತ ನಿವೇಶನ ಲಭ್ಯವಾಗಿಲ್ಲ. ಹಾಗಾಗಿ ನಿವೇಶನ ಕಲ್ಪಿಸುವ ಜವಾಬ್ದಾರಿಯನ್ನು ಸರ್ಕಾರ ಹಾಗೂ ಸಚಿವರಿಗೆ ಬಿಡೋಣ. ಸಮಾಜದ ಏಕೈಕ ಆಸ್ತಿಯಾಗಿರುವ ವೀರಶೈವ ವಿದ್ಯಾರ್ಥಿನಿಲಯವನ್ನು ಯಾವುದೇ ಕಾರಣಕ್ಕೂ ಕೆಡವಲು ಅವಕಾಶ ನೀಡಲ್ಲ. ನವೀಕರಣಕ್ಕೆ ಮಹಾಸಭಾದಿಂದ ಯೋಜನೆ ರೂಪಿಸಲಾಗಿದೆ. ಕಷ್ಟ ಕಾಲದಲ್ಲಿ ದೇಣಿಗೆ ಸಂಗ್ರಹಿಸಿ, ಕಟ್ಟಿರುವ ನಿಲಯದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆಯೂ ಕ್ಷೀಣಿಸಿರುವುದರಿಂದ ಪರ್ಯಾಯ ಚಟುವಟಿಕೆಗಳಿಗೆ ಬಳಸಿಕೊಳ್ಳಲು ನವೀಕರಣದ ಅಗತ್ಯವಿದೆ ಎಂದು ತಿಳಿಸಿದರು.

ಎಂ.ಎಲ್.ಹುಂಡಿ ಮಠದ ಶ್ರೀಗೌರಿಶಂಕರ ಸ್ವಾಮೀಜಿ ಮಾತನಾಡಿ, ವೀರಶೈವ ವಿದ್ಯಾರ್ಥಿನಿಲಯವನ್ನು ಶುಭ ಸಮಾರಂಭಗಳಿಗೆ ಸದ್ಬಳಕೆಯಾಗುವಂತೆ 30 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಲು ವೀರಶೈವ ಲಿಂಗಾಯತ ಮಹಾಸಭಾದಿಂದ ಯೋಜನೆ ರೂಪಿಸಲಾಗಿದೆ. ಕಟ್ಟಡದ ಮೂಲ ಸ್ವರೂಪಕ್ಕೆ ಯಾವುದೆ ಧಕ್ಕೆ ತಾರದೆ, ನವ ವಿನ್ಯಾಸದ ಸ್ಪರ್ಶ ನೀಡಲಾಗುತ್ತದೆ. ಸರ್ಕಾರ ಬಸವ ಭವನ ನಿರ್ಮಾಣಕ್ಕೆ ನಿವೇಶನ ಮತ್ತು ಅನುದಾನ ಮಂಜೂರು ಮಾಡಿದ ಬಳಿಕ ಭವನ ನಿರ್ಮಾಣ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ಮಹಾಸಭಾದ ಅಧ್ಯಕ್ಷ ಸಿ.ಎಂ.ಪ್ರಕಾಶ್ ಮಾತನಾಡಿ, ವೀರಶೈವ ವಿದ್ಯಾರ್ಥಿನಿಲಯವನ್ನು ನವೀಕರಣಗೊಳಿಸುವ ನಿರ್ಣಯಕ್ಕೆ ಸಭೆಯಲ್ಲಿ ಅನುಮೋದನೆ ನೀಡಬೇಕು. ನವೀಕರಣ ಕಾಮಗಾರಿ ಆರಂಭಿಸಿದ ಬಳಿಕ ಯಾರಿಂದಲೂ ದೂರುಗಳು ಬರಬಾರದು. ಮುಂದಿನ ದಿನಗಳಲ್ಲಿ ಯಾವುದೆ ಆಕ್ಷೇಪಗಳಿಗೆ ಅವಕಾಶವಿಲ್ಲ. ತಾಲೂಕಿನ ಸಮುದಾಯ ನಮ್ಮ ತಂಡವನ್ನು ಬೆಂಬಲಿಸಿ, ಜವಾಬ್ದಾರಿ ನೀಡಿದ್ದರಿಂದ ಮೊದಲ ಹಂತದಲ್ಲಿ ವಿದ್ಯಾರ್ಥಿನಿಲಯದ ನವೀಕರಣಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಉಪಾಧ್ಯಕ್ಷ ಬಿ.ಎಂ.ಶಿವಮಲ್ಲಪ್ಪ ವೀರಶೈವ ವಿದ್ಯಾರ್ಥಿನಿಲಯ ನವೀಕರಣದ ನೀಲಿನಕ್ಷೆ ಮತ್ತು ಯೋಜನಾ ವೆಚ್ಚದ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಹೇಳವರಹುಂಡಿ ನಟರಾಜು ಮಾತನಾಡಿ, ಬೃಂದಾವನ ಬಡಾವಣೆ ಸೇರಿದಂತೆ ಮುಡಾ ಅನುಮೋದನೆ ಪಡೆದ ನೂತನ ಬಡಾವಣೆಗಳಲ್ಲಿರುವ ಸಿಎ ನಿವೇಶನಗಳನ್ನು ಬಸವಭವನ ನಿರ್ಮಾಣಕ್ಕೆ ನೀಡುವಂತೆ ಸಿಎಂ ಹಾಗೂ ಸಚಿವರಿಗೆ ಮನವಿ ಸಲ್ಲಿಸಬೇಕೆಂದು ಸಲಹೆ ನೀಡಿದರು. ವಿದ್ಯಾರ್ಥಿನಿಲಯಕ್ಕೆ ಹಿರಿಯೂರು ಪ್ರಕಾಶ್ 25 ಸಾವಿರ ರೂ. ದೇಣಿಗೆ ನೀಡುವುದಾಗಿ ತಿಳಿಸಿದರು.

ಮಾಡ್ರಳ್ಳಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮುಡುಕುತೊರೆ ಕಲ್ಲು ಮಠದ ಶ್ರೀ ನಂದೀಕೇಶ್ವರ ಸ್ವಾಮೀಜಿ, ಹೊಸೂರು ಹುಂಡಿ ಮಠದ ಶ್ರೀ ರಾಜಶೇಖರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷರಾದ ಕೆ.ಕಿರಣ್, ಪಿ.ಎಸ್.ಅಂಬಿಕಾ, ಪ್ರಧಾನ ಕಾರ್ಯದರ್ಶಿ ಕುರುಬೂರು ವಿ.ಶಿವಶಂಕರ್, ಕಾರ್ಯದರ್ಶಿಗಳಾದ ಮಲ್ಲಪ್ಪ, ಹಲವಾರ ಪರಮೇಶ್ ಪಟೇಲ್, ಕೋಶಾಧ್ಯಕ್ಷ ದೊಡ್ಡನಹುಂಡಿ ಜಿ.ನಂಜುಂಡಸ್ವಾಮಿ, ಕಾರ್ಯಕಾರಿಣಿ ಸದಸ್ಯರಾದ ಎಸ್.ಬಿ.ಸುಗಂಧರಾಜು, ತೋಂಟೇಶ್, ಓಂಕಾರ್ ಸ್ವಾಮಿ, ಎಂ.ಗುರುಸ್ವಾಮಿ, ಕೆ.ಎಂ.ಮಲ್ಲು, ಎಂ.ಪರಶಿವಮೂರ್ತಿ, ಟಿ.ಪಿ.ಶಿವಕುಮಾರಸ್ವಾಮಿ, ಎಂ.ಸುರೇಶ, ಬಿ.ಎಸ್.ಜ್ಞಾನೇಶ್ವರಿ, ಟಿ.ಎಂ. ರವಿ, ಹಿರಿಯೂರು ವೀರೇಂದ್ರ (ನವೀನ), ಟಿ.ಬಿ.ಚಂದ್ರಧರ, ಕುಮಾರ್, ಎಂ.ಮಹೇಶ್, ಮುಖಂಡರಾದ ಮೂಗೂರು ಚಂದ್ರಶೇಖರ್, ತುರಗನೂರು ರಾಜಣ್ಣ, ಕೆ.ಜಿ.ವೀರಣ್ಣ, ಕೆಬ್ಬೆಹುಂಡಿ ಸೋಮಶೇಖರಪ್ಪ, ಕೆಇಬಿ ಸಿದ್ಧಲಿಂಗಸ್ವಾಮಿ, ಶೇಖರಪ್ಪ, ನಾಗರಾಜಪ್ಪ, ನಿಂಗಪ್ಪ, ರಾಜಶೇಖರ್, ರತ್ನರಾಜ್ ಇದ್ದರು.