ಬೀದರ್: ನಾಡಿನ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಸ್ಥಾಪಿಸುವ ಸಿಎಂ ಬಸವರಾಜ ಬೊಮ್ಮಾಯಿ ತೀರ್ಮಾನ ಐತಿಹಾಸಿಕವಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಬಣ್ಣಿಸಿದ್ದಾರೆ.
ಬಸವತತ್ವ ನಿಷ್ಠರಾದ ಬೊಮ್ಮಾಯಿ ಅವರು ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಸೇರಿ ಶರಣ ಸ್ಮಾರಕಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ. ಇದೀಗ ವಿಧಾನಸೌಧದಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪಿಸಲು ಮುಂದಾಗುವ ಮೂಲಕ ಹೊಸ ಇತಿಹಾಸ ರಚಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಉತ್ತಮ ಬದುಕು, ಸಮಸಮಾಜ ನಿರ್ಮಾಣ, ಕಲ್ಯಾಣ ರಾಜ್ಯ ಕಟ್ಟಲು ನೆರವಾಗುವಂಥ ತತ್ವಗಳನ್ನು ಬಸವಣ್ಣನವರು ನೀಡಿದ್ದಾರೆ. ಇವುಗಳಲ್ಲಿ ಕಾಯಕ ಮತ್ತು ದಾಸೋಹ ಪ್ರಮುಖವಾಗಿವೆ. ಕಾಯಕ ಎಂಬುದು ಉತ್ಪಾದನೆ, ದಾಸೋಹ ಎಂಬುದು ವಿತರಣೆಗೆ ಸಂಬಂಧಿಸಿದ್ದು. ಉತ್ಪಾದನೆ ಮತ್ತು ವಿತರಣೆ ಈ ಎರಡೂ ಕೂಡಿದರೆ ಅಭಿವೃದ್ಧಿ. ಇಂಥ ಅದ್ಭುತ ತತ್ವ ನೀಡಿದ ಅಣ್ಣನವರ ಪ್ರತಿಮೆ ವಿಧಾನಸೌಧದಲ್ಲಿ ಸ್ಥಾಪನೆಯಾಗಿ ಎಲ್ಲರಿಗೂ ಪ್ರೇರಣೆ ನೀಡಲಿದೆ ಎಂದಿದ್ದಾರೆ.