ಜಿಲ್ಲೆ

ಬಸವ ಪಂಚಮಿ; ಕೊಳಗೇರಿ ಮಕ್ಕಳಿಗೆ ಹಾಲು ವಿತರಣೆ

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ರಾಮತೀರ್ಥ ದೇವಸ್ಥಾನದ ಸಮೀಪದ ಕೊಳಗೇರಿ ಪ್ರದೇಶದಲ್ಲಿರುವ ಮಕ್ಕಳು, ಮಹಿಳೆಯರಿಗೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಹಾಲು ವಿತರಿಸಿ ಬಸವ ಪಂಚಮಿಯನ್ನು ಆಚರಿಸಲಾಯಿತು.

ನಂತರ ಮಾತನಾಡಿದ ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ, ನಾಗರ ಪಂಚಮಿಯಂದು ಅಮೃತಕ್ಕೆ ಸಮನಾದ ಹಾಲು ಮತ್ತು ಆಹಾರವನ್ನು ಕಲ್ಲು, ಮಣ್ಣು ಪಾಲು ಮಾಡುವ ಸಂಪ್ರದಾಯವನ್ನು ಬಿಟ್ಟು, ಬಡ, ಅನಾಥ, ದುರ್ಬಲ ಮಕ್ಕಳಿಗೆ ಅವುಗಳನ್ನು ನೀಡುವ ಮೂಲಕ ಅವರಲ್ಲಿ ದೇವರನ್ನು ಕಾಣುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಬಾಲ್ಯದಿಂದಲೇ ಮಕ್ಕಳಲ್ಲಿ ಇಂತಹ ವೈಜ್ಞಾನಿಕ ಚಿಂತನೆಯನ್ನು ಮೂಡಿಸಿದರೆ ಅವರು ಮುಂದೆ ದೊಡ್ಡವರಾದ ಮೇಲೆ ಆಚರಣೆ ಮಾಡಲಾರರು. ಆದ್ದರಿಂದ ಇದರ ಬಗ್ಗೆ ಎಲ್ಲೆಡೆ ಜಾಗೃತಿ ಉಂಟಾಗಬೇಕಾಗಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಪರಮೇಶ್ವರ ಬಿ.ದೇಸಾಯಿ ಮಾತನಾಡಿ, ನಮ್ಮ ದೇಶದಲ್ಲಿ ಇಂದಿಗೂ ಕೂಡಾ ಅನೇಕ ಮಕ್ಕಳು ಅಪೌಷ್ಠಿಕತೆಯಿಂದ ಬಳಲಿ, ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಹಾರ, ಹಾಲನ್ನು ಅನಾವಶ್ಯಕವಾಗಿ ಹಾಳು ಮಾಡಬಾರದು. ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಿದರೇ ಅದು ಹೆಚ್ಚಿನ ಮಹತ್ವ ಪಡೆದುಕೊಳ್ಳಲು ಸಾಧ್ಯವಾಗುತ್ತದೆಯೆಂದು ನುಡಿದರು.

ಪ್ರಮುಖರಾದ ಎಂ.ಬಿ.ನಿಂಗಪ್ಪ, ಪ್ರಕಾಶ ಸರಸಂಬಿ, ಮಹಾಂತೇಶ ಬಿ.ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಅರ್ಜುನ ಪಾಲನ್ ಸೇರಿದಂತೆ ಮತ್ತಿತರರಿದ್ದರು.