filter: 104; fileterIntensity: 0.8; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.5700792, 0.39349994);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 36; 
ಜಿಲ್ಲೆ

ಬಸವ ನಾಡಿನಲ್ಲಿ ಬುದ್ಧನ ಸ್ಮರಣೆ ಆ. 10ಕ್ಕೆ

ಚಿತ್ರದುರ್ಗ: ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪ ಅವರ ಒಡನಾಡಿಯಾಗಿದ್ದ ಟಿಬೆಟಿಯನ್ ಬೌದ್ಧ ಧರ್ಮ ಗುರು ದಲೈ ಲಾಮಾ ಅವರ 90ನೇ ಜನ್ಮದಿನವನ್ನು ದುರ್ಗದಲ್ಲಿ ಆ. 10ರಂದು ‘ಬಸವ ನಾಡಿನಲ್ಲಿ ಬುದ್ಧನ ಸ್ಮರಣೆ’ ಕಾರ್ಯಕ್ರಮದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಎಸ್.ಎನ್. ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎಚ್. ಹನುಮಂತಪ್ಪ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಲೈ ಲಾಮಾ ಅವರೊಂದಿಗೆ 80 ಸಾವಿರ ಮಂದಿ ಟಿಬೆಟಿಯನ್ನರನ್ನು ಚೀನಾದಿಂದ ಗಡಿಪಾರು ಮಾಡಲಾಯಿತು. ಆಗ ಭಾರತದಲ್ಲಿ ಪ್ರಧಾನಿಯಾಗಿದ್ದ ನೆಹರು, ಕರ್ನಾಟಕದ ಸಿಎಂ ಆಗಿದ್ದ ಎಸ್. ನಿಜಲಿಂಗಪ್ಪ ಆಶ್ರಯ ನೀಡಿದರು. ಅದರ ಗೌರವಾರ್ಥ ‘ಥ್ಯಾಂಕ್ ಯು ಭಾರತ’, ಥ್ಯಾಂಕ್ ಯು ಕರ್ನಾಟಕ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಸ್ನೇಹ ಸೌಹಾರ್ದಯುತ ವರ್ಷವಾಗಿಯೂ ಜನ್ಮದಿನ ಆಚರಿಸಲಾಗುತ್ತಿದೆ. ಅಂದು ಬೆಳಗ್ಗೆ 9ಕ್ಕೆ 500 ಮಂದಿ ಬೌದ್ಧ ಬಿಕ್ಷುಗಳಿಂದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಇದಕ್ಕೆ ಭಾರಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಚಾಲನೆ ನೀಡುವರು. ಡಾ.ಬಿ.ಆರ್. ಅಂಬೇಡ್ಕರ್, ರಾಜವೀರ ಮದಕರಿನಾಯಕ, ವೀರವನಿತೆ ಒನಕೆ ಓಬವ್ವ, ಕನಕದಾಸರ ಪ್ರತಿಮೆಗೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಿದ್ದಾರೆ ಎಂದರು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ನಮ್ಮ ಕನ್ನಡಿಗರು ಟಿಬೆಟಿಯನ್ ಬೌದ್ಧ ಬಿಕ್ಷುಗಳಿಗೆ ಮಾಡಿದ ಉಪಕಾರಕ್ಕಾಗಿ ದಲೈ ಲಾಮಾ ಅವರಿಂದಲೇ ಬಂದ ಆತ್ಮೀಯ ಸೂಚನೆಯನ್ವಯ ಸಾಂಸ್ಕೃತಿಕ ನಾಯಕ ಬಸವಣ್ಣನ ನಾಡಿನಲ್ಲಿ ಬುದ್ಧ ಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ತಿಳಿಸಿದರು.

ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಅನುಭವ ಮಂಟಪದಲ್ಲಿ ಅಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೂ ಸಭಾ ಕಾರ್ಯಕ್ರಮವಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಉದ್ಘಾಟಿಸುವರು. ಸಚಿವರಾದ ಕೆ.ಎಚ್. ಮುನಿಯಪ್ಪ, ಡಿ. ಸುಧಾಕರ್, ಸಂಸದ ಗೋವಿಂದ ಕಾರಜೋಳ, ಕೆ.ಸಿ. ವೀರೇಂದ್ರಪಪ್ಪಿ ಸೇರಿ ಜಿಲ್ಲೆಯ ಎಲ್ಲ ಶಾಸಕರು ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಎಸ್.ಎನ್.ಟ್ರಸ್ಟ್‌ನ ಟ್ರಸ್ಟಿ ಷಣ್ಮುಖಪ್ಪ ಮಾತನಾಡಿ, ನಿಜಲಿಂಗಪ್ಪ ಪುಣ್ಯ ಭೂಮಿಯಲ್ಲಿ ಅಂದು ಮಧ್ಯಾಹ್ನ 3ಕ್ಕೆ 500 ಮಂದಿ ಬೌದ್ಧ ಬಿಕ್ಷುಗಳು ಪೂಜೆ ಸಲ್ಲಿಸಲಿದ್ದಾರೆ ಎಂದರು.

ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ, ಪಾಂಡುರಂಗಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷರಾದ ಎಚ್. ಮಂಜಪ್ಪ, ಎಚ್.ಜೆ. ಕೃಷ್ಣಮೂರ್ತಿ, ವಕೀಲ ಜಯಣ್ಣ, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಶಾಂತಕುಮಾರ್ ಇತರರಿದ್ದರು.