ಜಿಲ್ಲೆ

ಬಸವ ತತ್ವಗಳಿಂದ ಸಮಾನತೆ

ಕೋಲಾರ: ಸಮಾನತೆಯ ಕ್ರಾಂತಿಗಾಗಿ ರಾಜ್ಯದ ಪ್ರಮುಖ ಮಠಾಧೀಶರು ಬಸವಣ್ಣ ಅವರ ತತ್ವಗಳಿಗೆ ಕೈ ಜೋಡಿಸಿ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕು ಎಂದು ಕರ್ನಾಟಕ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ತ್ಯಾಗರಾಜ್ ಹೇಳಿದರು.

ಪರಿಷತ್ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಕವಿಗೋಷ್ಠಿ ಹಾಗೂ ತ್ಯಾಗರಾಜು ವಿರಚಿತ ವಿ.ರಾಮಕೃಷ್ಣ ಅವರ ಜೀವನ ಚರಿತ್ರೆ ಆಧಾರಿತ ಕಾಯಕ ಯೋಗಿ ಕೃತಿ ಲೋಕಾರ್ಪಣೆ ಕಾರ್ಯಕ್ರವವನ್ನು ವಚನ ವಾಚಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಶರಣ ಎಂಬುದು ಜಾತಿ ಸೂಚಕವಲ್ಲ, ಅದೊಂದು ಗೌರವಿಸುವ ಪದ. ಜಂಗಮ ಎಂಬುದು ಆತ್ಮಶುದ್ಧಿ ಬಿಂಬಿಸುವಂತದ್ದು. ಆದರೆ ಕೆಲ ಪಟ್ಟಭದ್ರ ಹಿತಾಸಕ್ತರು ಇದಕ್ಕೆ ಜಾತಿ ಸಮೀಕರಣ ಮಾಡಿರುವುದು ಖೇದಕರ ಎಂದರು.

ಮಠ ಮಾನ್ಯಗಳು ಬಸವಣ್ಣನನ್ನು ಮಾತ್ರ ಮಾನ್ಯ ಮಾಡಿ ವಚನ ಮತ್ತು ತತ್ವ ಸ್ವೀಕರಿಸದೆ ಗಾಳಿಗೆ ತೂರಿದ್ದರಿಂದ ವಚನಗಳಿಗೆ ಭಾರಿ ಹಿನ್ನಡೆಯಾಯಿತು. ಮಠ ಮಾನ್ಯಗಳಿಂದಲೇ ಉಪಜಾತಿ ಹುಟ್ಟುಹಾಕಿದ್ದು ಕೂಡ ಬಸವ ಧರ್ಮ ಮೂಲೆ ಗುಂಪಾಗಲು ಕಾರಣವಾಯಿತು. ಸಮಾನತೆಯ ಕ್ರಾಂತಿಗೆ ಎಲ್ಲ ಮಠಮಾನ್ಯಗಳ ಮಠಾಧೀಶರು ಕೈ ಜೋಡಿಸಿದಾಗ ಸಮ ಸಮಾಜ ಕಟ್ಟಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ಚಿತ್ರಕಲಾ ಪರಿಷತ್ ಅಧ್ಯಕ್ಷ ವಿ.ರಾಮಕೃಷ್ಣ ಮಾತನಾಡಿ, ಕೋಲಾರದಲ್ಲಿ ಚಿತ್ರಕಲಾ ಪರಿಷತ್ ನಿರ್ಮಾಣಕ್ಕೆ ಮುಂದಡಿ ಇಡುವ ಮೂಲಕ ಮುಂದಿನ ಪೀಳಿಗೆಗೂ ಚಿತ್ರಕಲೆಗಳ ಶಿಕ್ಷಣದ ಅಭಿರುಚಿ ಬೆಳೆಸಿ ಉಳಿಸಬೇಕು ಎಂದರು.

ಜಿಲ್ಲಾ ಕನ್ನಡ ಪಿಯು ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್ ಮಾತನಾಡಿ. ಕವಿಗಳು ಚಲನಶೀಲತೆಯಿಂದ ಕಾಲಘಟ್ಟದ ಅನುಸಾರವಾಗಿ ಕವಿತೆ ಬರೆಯುವ ಮೂಲಕ ಸಮಾಜವನ್ನು ಎಚ್ಚರಿಸುವಂತಾಗಬೇಕು. ಕಾವ್ಯ ರಚಿಸುವ ಜತೆಗೆ ಮನಸ್ಸು ಒಗ್ಗೂಡಿಸುವ ಕಾವ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು, ದೌರ್ಜನ್ಯದ ವಿರುದ್ಧ ಧ್ವನಿಯಾಗುವ ಸಾಹಿತ್ಯ ಬರಬೇಕು ಎಂದರು.

ಕವಿಗಳಾದ ಕೋಲಾಳಪ್ಪ, ಅಶೋಕ್ ಬಾಬು, ಆಶ್ವಿನಿ, ಶಂಕರೇಗೌಡ, ಶಾರದಮ್ಮ, ರೂಪಾ ಶಿವಕುಮಾರ್, ಅಸಿಫ್ ಬೇಗಂ. ಜಿ.ಟಿ.ರಾಮಚಂದ್ರ, ರಾಧಿಕಾ, ಡಾ.ಪ್ರಕಾಶ್, ಶೈಲಜಾ, ಲಕ್ಷ್ಮಣ್, ಇ.ವೆಂಕಟಸ್ವಾಮಿ, ಕೆ.ಎಂ. ಸೋಮಶೇಖರ್ ವಚನ ವಾಚಿಸಿದರು. ಪರಿಷತ್ ಕಾರ್ಯದರ್ಶಿ ರಘುನಂದನ್ ರಾಜೋಳಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಟಿ.ಸುಬ್ಬರಾಮಯ್ಯ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ, ವಚನ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಾಗೇರಿ ಶ್ರೀನಿವಾಸ್, ಮುಖಂಡರಾದ ರೋಣೂರು ವೆಂಕಟೇಶ್, ಎಂ.ಎ. ರೇಣುಕಾನಂದ, ರುದ್ರಪ್ಪ, ಮುನಿರೀರಣ್ಣ, ಗಂಗಾಧರ್ ಹಾಜರಿದ್ದರು.

ಮುಂದಿನ ದಿನಗಳಲ್ಲಿ ಮನೆ ಮನೆಗೆ ವಚನ ಸಾಹಿತ್ಯ ತಲುಪಿಸುವ, ಶಾಲೆ ಹಾಗೂ ಕಾಲೇಜುಗಳಲ್ಲಿ ವಚನ ಸಾಹಿತ್ಯದ ಸ್ಪರ್ಧೆ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಮ್ಮೇಳನ ಆಯೋಜಿಸಿ ಕಾಯಕಯೋಗಿ ಪ್ರಶಸ್ತಿ ನೀಡಲಾಗುವುದು. ಡಾ.ನಾ.ಮುನಿರಾಜು, ಕರ್ನಾಟಕ ವಚನ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ