ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದದ ಸುಶೀಲಾದೇವಿ ಬಿ.ಪಟೇಲ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪೌರಾಯುಕ್ತ ರಾಜು.ಡಿ.ಬಣಕಾರ ಅವರಿಗೆ ಕಾಯಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಶ್ರೀ ಗುರುಬಸವ ಪಟ್ಟದೇವರು, ಶ್ರೀ ಶಿವಾನಂದ ಸ್ವಾಮೀಜಿ, ಡಾ.ಎಸ್.ಬಿ.ದುರ್ಗೆ, ಕುಪೇಂದ್ರ ಪಾಟೀಲ್, ಮಾಲತಿ ಇವಳೆ, ನಾಗರಾಜ ಕರ್ಪೂರ, ಮಡಿವಾಳಯ್ಯ ಹಿರೇಮಠ ಇತರರಿದ್ದರು. 
ಜಿಲ್ಲೆ

ಬಸವ ತತ್ವ ಪ್ರಚಾರಕ್ಕೆ ಪಟೇಲ್ ದಂಪತಿ ಶ್ರಮ ಅನನ್ಯ

ಬಸವಕಲ್ಯಾಣ: ಅನುಭವ ಮಂಟಪಕ್ಕಾಗಿ ದೊಡ್ಡ ದಾಸೋಹ ಮಾಡಿದ ಶ್ರೇಯಸ್ಸು ಡಾ.ಬಿ.ವಿ ಪಟೇಲ್ ಅವರಿಗೆ ಸಲ್ಲುತ್ತದೆ. ಬಸವ ತತ್ವಕ್ಕಾಗಿ ಪಟೇಲ್ ದಂಪತಿ ಸೇವೆ ಅನನ್ಯ ಎಂದು ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಬಣ್ಣಿಸಿದರು.

ಡಾ.ಬಿ.ವಿ.ಪಟೇಲ್ ಹಾಗೂ ಶರಣೆ ಸುಶೀಲಾದೇವಿ ಬಿ.ಪಟೇಲ್ ಸ್ಮರಣಾರ್ಥವಾಗಿ ಅನುಭವ ಮಂಟಪ ಪರಿಸರದಲ್ಲಿ ಸುಶೀಲಾದೇವಿ ಬಿ.ಪಟೇಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ವಿಶ್ವಬಸವ ಧರ್ಮ ಟ್ರಸ್ಟ್, ಅನುಭವ ಮಂಟಪ ಸಹಯೋದಡಿ ಶುಕ್ರವಾರ ಆಯೋಜಿಸಿದ್ದ ಸುಶೀಲಾದೇವಿ ಬಿ.ಪಟೇಲ್ ಅವರ ೧೧ನೇ ಪುಣ್ಯಸ್ಮರಣೆ ಹಾಗೂ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಜಗತ್ತಿಗೆ ಮಾರ್ಗದರ್ಶನ ಮಾಡಿದ ನೆಲ ಕಲ್ಯಾಣ. ಪೂಜ್ಯಡಾ.ಚನ್ನಬಸವ ಪಟ್ಟದೇವರು ಕಲ್ಯಾಣಕ್ಕೆ ಬಂದು ನೆಲಸಿದ ನಂತರ ಅನುಭವ ಮಂಟಪವಾಯಿತು. ಡಾ.ಬಿ.ವಿ ಪಟೇಲ್‌ರು ಅನುಭವ ಮಂಟಪಕ್ಕೆ ಹೊಸ ರೂಪ ನೀಡಿದರು. ಈಗ ೬೫೦ ಕೋಟಿ ರೂ.ವೆಚ್ಚದಲ್ಲಿ ಸರ್ಕಾರದಿಂದ ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿದೆ. ಅನುಭವ ಮಂಟಪ ಸಂಸ್ಥೆ ಸ್ಥಾವರವಲ್ಲ. ಇದು ಜಂಗಮ ಸ್ವರೂಪಿ, ಸದಾ ಚೈತನ್ಯಶೀಲ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಭಾಲ್ಕಿಯ ಶ್ರೀ ಗುರುಬಸವ ಪಟ್ಟದೇವರು ಆಶೀರ್ವಚನ ನೀಡಿ, ಜೀವನ ಭಗವಂತ ಕೊಟ್ಟ ಅದ್ಬುತ ಕೊಡುಗೆ. ಜೀವನದಲ್ಲಿ ಎಲ್ಲವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಮುನ್ನಡೆದಾಗ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇದೇ ಜೀವನದ ಆಶಯವೂ ಆಗಿದೆ. ವಿಶ್ವಗುರು ಬಸವಣ್ಣನವರು ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆ. ವಚನ ಸಂವಿಧಾನವನ್ನು ನೀಡಿದ್ದಾರೆ. ಜಾಗತಿಕ ಮೌಲ್ಯಗಳನ್ನು ಒಳಗೊಂಡಿರುವ ಬಸವ ತತ್ವ ಸರ್ವಕಾಲಕ್ಕೂ ಪ್ರಸ್ತುತ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅನುಭವ ಮಂಟಪ ಟ್ರಸ್ಟ್ ಕಾರ್ಯದರ್ಶಿ ಡಾ.ಎಸ್.ಬಿ.ದುರ್ಗೆ, ಸುಶೀಲಾದೇವಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕುಪೇಂದ್ರ ಪಾಟೀಲ್, ನಾಗರಾಜ ಕರ್ಪೂರ, ಕುಮಾರಿ ಬಸವ ಚಿಂಚನಾ, ಕಾಯಕ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರಾದ ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ನಗರಸಭೆ ಪೌರಾಯುಕ್ತ ರಾಜು.ಡಿ.ಬಣಕಾರ ಮಾತನಾಡಿದರು.

ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸುಶೀಲಾದೇವಿ ಟ್ರಸ್ಟ್ ಕಾರ್ಯದರ್ಶಿ ಮಾಲತಿ ಇವಳೆ, ಭಾಲ್ಕಿಯ ಮಡಿವಾಳ ಹಿರೇಮಠ ಇದ್ದರು. ವಿಜಯಕುಮಾರ ಜುಂಜಾ ಸ್ವಾಗತಿಸಿ, ನಿರೂಪಣೆ ಮಾಡಿದರು. ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ನಗರಸಭೆ ಪೌರಾಯುಕ್ತ ರಾಜು.ಡಿ.ಬಣಕಾರ ಅವರಿಗೆ ಕಾಯಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಗ್ರಾಮೀಣ ಭಾಗದ ಕಡುಬಡತನದಲ್ಲಿ ವಿದ್ಯಾಭ್ಯಾಸ ಮಾಡಿ ಎಂಬಿಬಿಎಸ್‌ಗೆ ಪ್ರವೇಶ ಪಡೆದ ಬಸವಪ್ರಜ್ಞ, ಸೌಮ್ಯ ಜಯರಾಜ, ಓಂಸಾಯಿ ನಾಗರಾಜ ಫರಹತಾಬಾದ್, ಬನಶಂಕರಿ ಶಿವರುದ್ರಪ್ಪ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

೧೨ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಲಿಂಗಾಯತ ಧರ್ಮ ಸ್ಥಾಪನೆಯಾಗಿದೆ. ಎಲ್ಲ ಸಮುದಾಯದ ಸಾವಿರಾರು ಜನ ಶರಣರು ಸತ್ಯಶುದ್ಧ ಕಾಯಕ ಮಾಡಿ, ಕಾಯಕದಿಂದ ಬಂದ ಆದಾಯವನ್ನು ದಾಸೋಹ ಮಾಡುತ್ತಿದ್ದರು. ಸಮಾಜದಲ್ಲಿ ಕಲ್ಮಷವನ್ನು, ಮೂಢನಂಬಿಕೆ, ಕಂದಾಚಾರಗಳನ್ನು ಹೊಡೆದೊಡಿಸಿ ಸಮ ಸಮಾಜಕ್ಕಾಗಿ ಬಸವಣ್ಣನವರು ಮಾಡಿದ ಕ್ರಾಂತಿ ಜಗತ್ತಿನಲ್ಲಿಯೇ ಶ್ರೇಷ್ಠ.

| ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಹುಲಸೂರು

ಅನುಭವ ಮಂಟಪದ ಪ್ರಗತಿಯಲ್ಲಿ ಡಾ.ಬಿ.ವಿ.ಪಟೇಲ್ ಕೊಡುಗೆ ದೊಡ್ಡದು. ಅವರು ಅಂದು ೧೮ ಎಕರೆ ಜಮೀನು ಖರೀಸಿದ್ದರು. ಇದು ಇಂದು ನೂತನ ಅನುಭವ ಮಂಟ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಜಗತ್ತು ಕಲ್ಯಾಣದ ಕಡೆ ನೋಡುವಂತೆ ಇಲ್ಲಿ ಅನುಭವ ಮಂಟಪ ನಿರ್ಮಾಣವಾಗುತ್ತಿದೆ

| ಡಾ.ಎಸ್.ಬಿ.ದುರ್ಗೆ ಕಾರ್ಯದರ್ಶಿ, ಅನುಭವ ಮಂಟಪ ಟ್ರಸ್ಟ್

ರಾಜ್ಯ ಮಟ್ಟದಲ್ಲಿ ನಡೆಯಲಿ: ಸುಶೀಲಾದೇವಿ ಚಾರಿಟೇಬಲ್ ಟ್ರಸ್ಟ್​ನಿಂದ ನಡೆಯುತ್ತಿರುವ ಈ ಕಾರ್ಯಕ್ರಮ ಮುಂದಿನ ಜೀವನದ ಪರಿಕಲ್ಪನೆ ಹೊತ್ತು ಮಕ್ಕಳು ಬೆಳೆಯಬೇಕು ಎನ್ನುವ ಆಶಯ ಹೊಂದಿದ್ದು, ಇಂತಹ ಕಾರ್ಯಕ್ರಮ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯಲಿ ಎಂದು ನಗರ ಸಭೆ ಪೌರಾಯುಕ್ತ ರಾಜು ಡಿ.ಬಣಕಾರ ಆಶಯವ್ಯಕ್ತಪಡಿಸಿದರು. ಸಮಾರಂಭದಲ್ಲಿ ಕಾಯಕ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಬಸವ ತತ್ವ ಒಪ್ಪಿಕೊಳ್ಳದ ಜೀವಿಗಳೇ ಇಲ್ಲ. ಎಲ್ಲರೂ ಒಪ್ಪಿಕೊಳ್ಳಬೇಕು. ವಚನಲ್ಲಿ ಅಮೃತ ಸಾರವಿದೆ. ಮುಂದೊಂದು ದಿನ ಎಲ್ಲ ಸಮುದಾಯದ ಜನರಿಗೂ ಅನುಭವ ಮಂಟಪ ಶ್ರೇಷ್ಠ ಶೃದ್ಧಾ ಕೇಂದ್ರವಾಗಲಿದೆ ಎಂದರು.

ಟ್ರಸ್ಟ್​ನಿಂದ ಜನಪರ ಕಾರ್ಯ: ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಪೂಜ್ಯ ಡಾ.ಚನ್ನಬಸವ ಪಟ್ಟದೇವರ ಕನಸಾಗಿತ್ತು. ಇದನ್ನು ನನಸು ಮಾಡವಲ್ಲಿ ಡಾ.ಬಿ.ವಿ ಪಟೇಲ್‌ರ ಕೊಡಗೆ ದೊಡ್ಡದು. ಅವರು ೧೫ ಎಕರೆ ಜಮೀನು ತಮ್ಮ ಸ್ವಂತ ಹಣದಿಂದ ಖರೀದಿಸಿ ಸ್ಥಿರತೆ ತಂದು ಕೊಟ್ಟ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಸುಶೀಲಾದೇವಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕುಪೇಂದ್ರ ಪಾಟೀಲ್ ಹೇಳಿದರು. ಸುಶೀಲಾದೇವಿ ಪಟೇಲ್‌ರು ಬಸವ ತತ್ವಕ್ಕಾಗಿ, ಕಲ್ಯಾಣದ ಕಾರ್ಯಕ್ಕಾಗಿ ಜೀವನ ಮುಡುಪಾಗಿಟ್ಟಿದ್ದರು. ಅವರ ಹೆಸರಿನಲ್ಲಿ ಆರಂಭಿಸಲಾಗಿರುವ ಟ್ರಸ್ಟ್​ನಿಂದ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.