ಬಸವಕಲ್ಯಾಣದ ಹರಳಯ್ಯ ಗವಿಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶ ಮತ್ತು ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಜಯಂತ್ಯುತ್ಸವವನ್ನು ಶ್ರೀ ಪ್ರಭು ಸ್ವಾಮೀಜಿ ಉದ್ಘಾಟಿಸಿದರು. ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಡಾ.ಕೆ. ರವೀಂದ್ರನಾಥ, ಬಾಬುರಾವ ತುಂಬಾ, ಚನ್ನಬಸಪ್ಪ ವಡ್ಡನಕೇರೆ, ಆಕಾಶ ಖಂಡಾಳೆ, ಶರಣಪ್ಪ ಪಾಟೀಲ, ಶಿವಬಸಪ್ಪ ಚನ್ನಮಲ್ಲೆ, ಸಂದೀಪ ಜಾಧವ್, ಅನಿತಾ ಇಸ್ಲಾಂಪುರೆ, ವಿಮಲಾಬಾಯಿ ವಾಘ್ಮಾರೆ ಇದ್ದರು. 
ಜಿಲ್ಲೆ

ಬಸವ ತತ್ವ ಕ್ರಿಯೆ-ಜ್ಞಾನದ ಸಮನ್ವಯ

ಬಸವಕಲ್ಯಾಣ: ಬಸವ ತತ್ವ ವಿಚಾರಕ್ಕಿಂತ ಆಚಾರ ಪ್ರಧಾನವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಡಾ.ಕೆ. ರವೀಂದ್ರನಾಥ ಹೇಳಿದರು.

ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ಹರಳಯ್ಯ ಗವಿಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶ ಮತ್ತು ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಜಯಂತ್ಯುತ್ಸವದಲ್ಲಿ ಅನುಭಾವ ನೀಡಿದ ಅವರು, ಬಸವ ತತ್ವ ಕ್ರಿಯೆ ಮತ್ತು ಜ್ಞಾನದ ಸಮನ್ವಯವಾಗಿದೆ ಎಂದರು.

ಬಸವ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡ ಲಿಂಗೈಕ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಲಿಂಗಾಯತ ಸಂಸ್ಕೃತಿ, ವಚನ ಸಂಸ್ಕೃತಿ ಉಳಿಸಿಕೊಂಡ ಬಂದ ಮಹಾನ್ ದಾರ್ಶನಿಕರು. ಸಕಲ ಜೀವಾತ್ಮರಿಗೆ ಲೇಸು ಬಯಸಿ ಬದುಕಿದವರು ಮಾತ್ರ ಶರಣ ಸ್ಥಲಕ್ಕೆ ಹೋಗುತ್ತಾರೆ. ಬಸವ ತತ್ವ ಕಾಯಕ ಜೀವಿಗಳ ಚಳವಳಿ, ಪಾರಮಾರ್ಥಿಕ ಮತ್ತು ಪ್ರಾಪಂಚಿಕವಾಗಿ ಸಮರ್ಥಳನ್ನಾಗಿ ಮಾಡಿ ಸ್ತ್ರೀಗೌರವ ಎತ್ತಿ ಹಿಡಿದು ಶರಣ ತತ್ವವನ್ನು ಅಕ್ಷರಶಃ ಪಾಲಿಸಿದವರು ಪೂಜ್ಯರು ಎಂದು ಬಣ್ಣಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಡೂರಿನ ಪ್ರಭುದೇವ ಸಂಸ್ಥಾನ ಮಠದ ಶ್ರೀ ಪ್ರಭು ಸ್ವಾಮೀಜಿ ಮಾತನಾಡಿ, ಶರಣು ಶರಣಾರ್ಥಿ ಲಿಂಗಾಯತ ಧರ್ಮದ ತತ್ವ ಮೂಲ ಬೇರಾಗಿದೆ. ತಳಸಮುದಾಯದವರನ್ನು ಶರಣನ್ನಾಗಿಸಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ. ಶರಣರು ಕಾಯಕಕ್ಕೆ ಮಹತ್ವ ನೀಡಿದ್ದರು ಎಂದು ಸ್ಮರಿಸಿದರು.

ಸಾನ್ನಿಧ್ಯ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ಕನ್ನಡ ಉಳಿದರೆ ಮಾತ್ರ ವಚನ ಸಾಹಿತ್ಯ ಉಳಿಯುತ್ತದೆ ಎಂಬುದನ್ನು ಅರಿತು ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಗಡಿಭಾಗದಲ್ಲಿ ಕನ್ನಡ ಭಾಷೆ ಉಳಿಸಿದ್ದಾರೆ. ಸದಾ ಕನ್ನಡತನ ಮೂಡಿಸುತ್ತ ಎಲ್ಲರಿಗೂ ಕನ್ನಡವನ್ನು ಕಲಿಸುತ್ತಲೇ ವಚನ ಸಾಹಿತ್ಯವನ್ನು ಜನಮನಕ್ಕೆ ತಲುಪಿಸಿದ್ದರು. ಮಠದ ಸಂಪ್ರದಾಯ ಮುರಿದು ಪಲ್ಲಕ್ಕಿಯಲ್ಲಿ ವಚನ ಸಾಹಿತ್ಯದ ಮೆರವಣಿಗೆ ನಡೆಸಿ ಬಸವತತತ್ವ ಸಾರಿದ ಮಹಾನ್ ಚೇತನ ಎಂದರು.

ಕೆಪಿಸಿಸಿ ಸದಸ್ಯ ಬಾಬುರಾವ ತುಂಬಾ ೨೦೨೫ರ ದಿನದರ್ಶಿಕೆ ಬಿಡುಗಡೆಗೊಳಿಸಿದರು. ಹುಮನಾಬಾದ್ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಚನ್ನಬಸಪ್ಪ ವಡ್ಡನಕೇರೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸುರೇಶ ಸೀಗಿ, ಶರಣಪ್ಪ ಪಾಟೀಲ, ಶಿವಬಸಪ್ಪ ಚನ್ನಮಲ್ಲೆ, ಆಕಾಶ ಖಂಡಾಳೆ, ಅನಿತಾ ಇಸ್ಲಾಂಪುರೆ, ವಿಮಲಾಬಾಯಿ ವಾಘ್ಮಾರೆ ಉಪಸ್ಥಿತರಿದ್ದರು.

ಹರಳಯ್ಯ ಸಮಾಜದ ಸಂದೀಪ ಜಾಧವ್ ಧ್ವಜಾರೋಹಣ ನೆರವೇರಿಸಿದರು. ಡಾ.ಮೀನಾಕ್ಷಿ ಬಿರಾದಾರ ಸ್ವಾಗತಿಸಿದರು. ಸಂಗಮೇಶ ತೊಗರಖೇಡೆ ನಿರೂಪಣೆ ಮಾಡಿದರು. ರೇವಣಪ್ಪ ಪಂಚಾಳ ಮತ್ತು ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು.

ಬಸವಣ್ಣನವರೇ ಧರ್ಮಗುರು. ವಚನ ಸಾಹಿತ್ಯವೇ ಧರ್ಮ ಗ್ರಂಥ. ಅನುಭವ ಮಂಟಪ ಸ್ಥಾಪಿಸುವುದರ ಮೂಲಕ ಲಿಂಗೈಕ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಕಲ್ಯಾಣದ ಬೆಳಕಾಗಿದ್ದಾರೆ.

| ಶ್ರೀ ಪ್ರಭು ಸ್ವಾಮೀಜಿ ಸಂಡೂರು