ಬೀದರ್: ಜಿಲ್ಲೆಯಲ್ಲಿ ಬಸವ ತತ್ವ ಪ್ರಚಾರ ಮತ್ತು ಪ್ರಸಾರ ಕಾರ್ಯಗಳಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಜಿ.ಕೆ. ಫೌಂಡೇಷನ್ ಅಧ್ಯಕ್ಷ ಗುರುನಾಥ ಕೊಳ್ಳೂರು ಹೇಳಿದರು.
ನಗರದ ಪ್ರತಾಪನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶ್ರಾವಣ ನಿಮಿತ್ತ ರಾಷ್ಟ್ರೀಯ ಬಸವ ದಳದ ವತಿಯಿಂದ ಆಯೋಜಿಸಿದ್ದ ಬಸವ ಜ್ಯೋತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ವಚನಾಂಕಿತ ವಿವಾದ ಬಗೆಹರಿದ ನಂತರ ಎಲ್ಲ ಬಸವ ಪರ ಸಂಘಟನೆಗಳು ಮತ್ತೆ ಒಗ್ಗೂಡಿವೆ. ಇದರಿಂದಾಗಿ ಬಸವ ತತ್ವ ಪ್ರಚಾರಕ್ಕೆ ಇನ್ನಷ್ಟು ಬಲ ಬಂದಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿದರು. ಅಕ್ಕಮಹಾದೇವಿ ಮಹಿಳಾ ಕಾಲೇಜು ಪ್ರಾಚಾರ್ಯ ಎಸ್.ಜಿ. ಹುಗ್ಗಿ ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಖಜಾನೆ ಇಲಾಖೆಯ ಉಪ ನಿರ್ದೇಶಕ ರವಿ ಹಕಾರಿ ಷಟ್‍ಸ್ಥಲ ಧ್ವಜಾರೋಹಣ ಮಾಡಿದರು. ಕಾರ್ಯಕ್ರಮದ ದಾಸೋಹಿಯಾದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ಹಾಗೂ ಇಂದುಧರ ಮಂಗಲಗಿ ದಂಪತಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಂಟೆಪ್ಪ ಗಂದಿಗುಡಿ ಹಾಗೂ ಮಹೇಶ ಬಿರಾದಾರ ವಚನ ಗಾಯನ ನಡೆಸಿಕೊಟ್ಟರು.
ಸುರೇಶ ಸ್ವಾಮಿ ಸಮ್ಮುಖ ವಹಿಸಿದ್ದರು. ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ಜಿಲ್ಲಾ ಸಹಾಯಕ ಖಜಾನೆ ಅಧಿಕಾರಿ ಸತೀಶ್ ಪಾಟೀಲ, ಜನ ಸಮೃದ್ಧಿ ಸಂಸ್ಥೆಯ ಉಪಾಧ್ಯಕ್ಷ ಶಿವಕುಮಾರ ಪಾಟೀಲ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಓಂಕಾಂತ ಸೂರ್ಯವಂಶಿ, ರಾಜೇಂದ್ರ ಜೊನ್ನಿಕೇರಿ, ಮಲ್ಲಿಕಾರ್ಜುನ ಪಂಚಾಕ್ಷರಿ, ಸಿದ್ದು ಶೆಟಕಾರ್, ವಿದ್ಯಾಶ್ರೀ ಸಂಸ್ಥೆಯ ಅಧ್ಯಕ್ಷೆ ಶೀಲಾ ದೇಶಪಾಂಡೆ, ಕಾರ್ಯದರ್ಶಿ ಗಣಪತಿ ಸೋಲಪುರೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷೆ ಡಾ. ವೈಶಾಲಿ, ಕಲ್ಯಾಣರಾವ್ ಚಳಕಾಪುರೆ, ರಾಷ್ಟ್ರೀಯ ಬಸವ ದಳದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಸಂಜುಕುಮಾರ ಪಾಟೀಲ ಉಪಸ್ಥಿತರಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಡಾ. ರಾಜಕುಮಾರ ಹೊಸದೊಡ್ಡೆ ನಿರೂಪಿಸಿದರು. ರವಿ ಪಾಪಡೆ ವಂದಿಸಿದರು.