ಸುದ್ದಿಗೋಷ್ಠಿಯಲ್ಲಿ ಡಾ.ಶಿವಾನಂದ ಎಂ. ಜಾಮದಾರ ಮಾತನಾಡಿದರು. ಬಸವರಾಜ ರೊಟ್ಟಿ, ಅಶೋಕ ಮಳಗಲಿ, ಮುರೆಗೆಪ್ಪ ಬಾವಿ ಇದ್ದರು. 
ಜಿಲ್ಲೆ

ಬಸವ ತತ್ತ್ವ ಅರಿತವರೇ ಆಡಳಿತಾಧಿಕಾರಿಯಾಗಲಿ

ಬೆಳಗಾವಿ: ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆದ ಅನಿಷ್ಠ ಘಟನೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶ್ರೀಮಠದ ಆಡಳಿತ ವ್ಯವಸ್ಥೆಗಾಗಿ ಆಡಳಿತಾಧಿಕಾರಿ ನೇಮಿಸಲಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವದಂತಿಗಳು ಕೇಳಿಬರುತ್ತಿವೆ. ಸರ್ಕಾರ ಆಡಳಿತಾಧಿಕಾರಿ ನೇಮಿಸುವುದೇ ಆದಲ್ಲಿ ಬಸವ ತತ್ತ್ವದ ಹಿನ್ನೆಲೆಯ ಯೋಗ್ಯ ವ್ಯಕ್ತಿಯನ್ನು ಮಾತ್ರ ಆಡಳಿತಾಧಿಕಾರಿಯಾಗಿ ನೇಮಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಎಂ. ಜಾಮದಾರ ಒತ್ತಾಯಿಸಿದರು.

ನಗರದ ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಯಾವುದೇ ಪ್ರಸಂಗದಲ್ಲಿ ವೀರಶೈವ ಅಥವಾ ಇನ್ನಾವುದೇ ಹಿನ್ನೆಲೆಯವರನ್ನು ಆಡಳಿತಾಧಿಕಾರಿ ಯನ್ನಾಗಿ ನೇಮಿಸಬಾರದು. ಈ ಮಠದ ಸಂಪ್ರದಾಯಕ್ಕೆ ಧಕ್ಕೆ ತರುವಂತಹ ವ್ಯಕ್ತಿ ನೇಮಕವಾದರೆ ಜಾಗತಿಕ ಲಿಂಗಾಯತ ಮಹಾಸಭಾದಿಂದ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುರುಘಾ ಮಠವು ನಾಲ್ಕು ಶತಮಾನಗಳಿಂದ ಬಸವ ಧರ್ಮವನ್ನು ರಕ್ಷಿಸಿ, ಬೆಳೆಸುವತ್ತ ಮಹತ್ವದ ಪಾತ್ರ ವಹಿಸುತ್ತ ಬಂದಿದೆ. ಅದೇ ಸಂಪ್ರದಾಯ ನಿರಂತರವಾಗಿ ನಡೆಯುವ ವ್ಯವಸ್ಥೆ ಮುಂದುವರಿಯುವಂತೆ ಸರ್ಕಾರವು ಗಮನಹರಿಸುವ ಅಗತ್ಯವಿದೆ. ಮಠದ ಎಲ್ಲ ಧಾರ್ಮಿಕ ಶೈಕ್ಷಣಿಕ ಹಾಗೂ ಇತರ ಬಹುಮುಖಿ ಕಾರ್ಯಗಳು ಬಸವ ತತ್ವಕ್ಕೆ ಅನುಗುಣವಾಗಿ ಸದಾ ನಡೆಯುತ್ತಿರಲಿ ಎನ್ನುವುದೇ ಸಮಸ್ತ ಲಿಂಗಾಯತ ಸಮುದಾಯದ ಆಶಯ. ಬಸವ ತತ್ವ ಅನುಯಾಯಿಗಳನ್ನೇ ಆಡಳಿತಾಧಿಕಾರಿಯನ್ನೇ ನೇಮಿಸಿ ಎಂದು ನಾವು ಪಟ್ಟು ಹಿಡಿಯುವುದಿಲ್ಲ. ಬಸವ ತತ್ವದ ಬಗ್ಗೆ ತಿಳಿದುಕೊಂಡವರು, ಅದರ ಬಗ್ಗೆ ಜ್ಞಾನ ಇರುವವರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು. ಬಸವರಾಜ ರೊಟ್ಟಿ, ಅಶೋಕ ಮಳಗಲಿ, ಮುರೆಗೆಪ್ಪ ಬಾವಿ ಸುದ್ದಿಗೋಷ್ಠಿಯಲ್ಲಿದ್ದರು.