ಜಿಲ್ಲೆ

ಬಸಂತಬಾಯಿ ಅಕ್ಕಿಗೆ ಸ್ನೇಹಶ್ರೀ ಪ್ರಶಸ್ತಿ

ಕಲಬುರಗಿ: ಖಾದ್ರಿ ಚೌಕ್ ಬಳಿಯ ಕಸ್ತೂರಿಬಾಯಿ ಬುಳ್ಳಾ ಸ್ಮಾರಕ ಸಾಂಸ್ಕೃತಿಕ ಭವನದಲ್ಲಿ ಜೂ.೨೩ರಂದು ಬೆಳಗ್ಗೆ ೧೧ಕ್ಕೆ ಅಖಿಲ ಕರ್ನಾಟಕ ಸ್ನೇಹ ಗಂಗಾವಾಹಿನಿಯಿAದ ಸ್ನೇಹಶ್ರೀ ಪ್ರಶಸ್ತಿ ಪ್ರದಾನ, ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯಲ್ಲಾಲಿಂಗ ಕೋಬಾಳ್ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಸ್ನೇಹಶ್ರೀ ಪ್ರಶಸ್ತಿಯನ್ನು ಶೈಕ್ಷಣಿಕ ಕ್ಷೇತ್ರದ ಸಾಧಕಿ ಬಸಂತಬಾಯಿ ಡಿ.ಅಕ್ಕಿ ಅವರಿಗೆ ನೀಡಲಾಗುತ್ತಿದೆ. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಎಂ.ಬಿ.ಹೆಗ್ಗಣ್ಣನವರ್ ಉದ್ಘಾಟಿಸುವರು. ಸಂಸ್ಥೆಯ ಗೌರವಾಧ್ಯಕ್ಷ ಡಾ.ಬಿ.ಪಿ.ಬುಳ್ಳಾ ಅಧ್ಯಕ್ಷತೆ ವಹಿಸುವರು. ಗುಲ್ಬರ್ಗ ವಿವಿ ಕುಲಸಚಿವೆ (ಮೌಲ್ಯಮಾಪನ) ಡಾ.ಮೇಧಾವಿನಿ ಕಟ್ಟಿ, ಸಾಹಿತಿ ಡಾ.ನಾಗಾಬಾಯಿ ಬುಳ್ಳಾ, ಪ್ರೊ.ಬಿ.ಜಿ. ನಾಟೀಕಾರ, ಡಾ.ರಾಮಚಂದ್ರ ಗಣಪುರ, ಡಾ.ಭೀಮರಾಯ ಅರಕೇರಿ, ಮಲ್ಲಿಕಾರ್ಜುನ ನಾಯಕೋಡಿ ಅತಿಥಿಗಳಾಗಿದ್ದಾರೆ.
ಈವರೆಗೂ ಗಂಗೂಬಾಯಿ ಹಾನಗಲ್ಲ, ಡಾ.ಗೀತಾ ನಾಗಭೂಷಣ, ಅಶೋಕ ಬಸ್ತಿ, ಕುರ್ದಳ್ಳಿ ಗಣೇಶ, ಸಿದ್ರಾಮಪ್ಪ ಸಣ್ಣೂರ, ಬಾಬುರಾವ ಚಿಂಚನಸೂರ, ಶಿವಲಿಂಗಪ್ಪ ಕಿನ್ನೂರ, ಪಿ.ಎನ್.ಮಾಲಿಪಾಟೀಲ್, ಶರಣಪ್ಪ ಕುಮಸಿ, ಉಮೇಶ ಮುದ್ನಾಳ, ಅಂಬರೀಶ್ ಕಾಮನಕೇರಿ, ನೀಲಕಂಠ, ಡಾ.ವೈ.ಎಚ್.ನಾಯಕವಾಡಿ ಅವರಿಗೆ ಸ್ನೇಹಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.