ಬಳ್ಳಾರಿ ; ಇಲ್ಲಿನ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ(ರಾಬಕೊವಿ) ಹಾಲು ಉತ್ಪಾದಕರ ಒಕ್ಕೂಟಕ್ಕೆ ಜಿಲ್ಲೆಯಲ್ಲಿ ನಿರ್ಮಿಸಿಲು ಉದ್ದೇಶಿಸಿರುವ ಮೆಗಾಡೇರಿ ನಿರ್ಮಾಣದ ಕಾಮಗಾರಿಯು ಕಳೆದ ಕೆಲ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಒಕ್ಕೂಟಕ್ಕೆ ಜು 25ರಿಂದ ಹೊಸ ಮಂಡಳಿ ಆರಂಭವಾಗಲಿದ್ದು, ಈ ವರ್ಷವಾದರೂ ಕಾಮಗಾರಿ ಪ್ರಾರಂಭವಾಗಲಿದಯೇ ಎಂಬುದು ಕಾದು ನೋಡಬೇಕಿದೆ.
ಕೆಲ ವರ್ಷಗಳ ಹಿಂದಯೇ ಕೋಟ್ಯಂತರ ರೂ. ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣ ಮಾಡಲು ಸರ್ಕಾರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಸ್ಥಳ ನಿಯೋಜನೆಗಾಗಿ ಇಲ್ಲಿನ ಅಲ್ಲಂ ಭವನ, ತಾಲೂಕಿನ ಶ್ರೀಧರಗಡ್ಡೆ ಹಾಗೂ ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಭೀಮಾನಾಯ್ಕ ಮೂರು ಜಿಲ್ಲೆಗಳಿಗೆ ಹಾಲು ಉತ್ಪಾದಕರಿಗೆ ಸಾಗಣೆ ವೆಚ್ಚ ತಗ್ಗಿಸುವ ಉದ್ದೇಶದಿಂದ ಸಂಡೂರು ತಾಲೂಕಿನ ತೋರಣಗಲ್ ಬಳಿ ಮೆಗಾಡೇರಿ ನಿರ್ಮಾಣ ಮಾಡಲು ಉದ್ದೇಶಿಸಿದ್ದರು. ಆದರೆ, ರಾಷ್ಟ್ರೀಯ ಡೇರಿ ಅಭಿವೃದ್ಧಿ ಬೋರ್ಡ್ (ಎನ್‌ಡಿಡಿಬಿ) ಸಮೀಪದಲ್ಲಿಯೇ ಕೈಗಾರಿಕೆ ಘಟಕಗಳಿದ್ದು ಹಾಲಿಗೆ ಬೂದಿ ಬಿದ್ದು ಕೆಡಬಹುದು ಎಂಬುದಾಗಿ ತಿರ್ಮಾನಿಸಿ ಸ್ಥಳ ರದ್ದು ಮಾಡಲಾಯಿತು. ಕಳೆದ ಒಂದು ವರ್ಷದ ಹಿಂದೆ ಜಿಲ್ಲಾಡಳಿತ ಮುತಾವರ್ಜಿ ವಹಿಸಿ ತಾಲೂಕಿನ ಕೊಳಗಲ್ ಗ್ರಾಮದ ಬಳಿ ಸರ್ವೆ ನಂ 139/ಬಿ ರಲ್ಲಿ 48. 28 ಎಕರೆ ವಿಸ್ತೀರ್ಣ ಪೈಕಿ 15 ಎಕರೆ ಸರ್ಕಾರಿ ಜಮೀನನ್ನು ಮೆಗಾಡೇರಿ ನಿರ್ಮಿಸಲು ನೀಡುವುದಾಗಿ ತಿಳಿಸಿದೆ. ಕರ್ನಾಟ ಭೂ ಮಂಜೂರಾತಿ ನಿಯಮದಡಿ ಜಮೀನಿನ ಮೂಲ ಬೆಲೆಯ ಶೇ. 50 ರಷ್ಟು ಜಿಲ್ಲಾಡಳಿತಕ್ಕೆ ಪಾವತಿಸಬೇಕಿದೆ. ಅಂದರೆ ಎಕರೆಗೆ 18.81 ಲಕ್ಷ ರೂ. ರಂತೆ ಹದಿನೈದು ಎಕರೆಗೆ 2.92 ಕೋಟಿ ರೂ. ಪಾವತಿಸಲು ಆದೇಶಿಸಲಾಗಿತ್ತು. ಆದರೆ, ಆಗ ನಿರ್ದೇಶಕರ ಅವಧಿ ಪೂರ್ಣಗೊಂಡಿದ್ದರಿಂದ ಬೋರ್ಡ್ ಇಲ್ಲದೆ ಯಾವ ತಿರ್ಮಾನ ತೆಗೆದುಕೊಳ್ಳಲು ಆಡಳಿತ ಮಂಡಳಿಗೆ ಹಕ್ಕು ಇರಲಿಲ್ಲ. ಅಲ್ಲದೆ, ನಿರ್ದೆಶಕ ಚುನಾವಣೆ ಧಾರವಾಡ ಹೈಕೋರ್ಟ್ ಪೀಠ ತಡೆ ನೀಡಿದ್ದರಿಂದ ಚುನಾವಣೆ ನಡೆಯಲು ಒಂದು ವರ್ಷ ಕಳೆಯಿತು ಮೆಗಾಡೇರಿ ನಿರ್ಮಾಣ ನನೆಗುದಿಗೆ ಬಿದ್ದಿತು.
ಜು.25 ಅಧ್ಯಕ್ಷರ ಆಯ್ಕೆ : ಕಳೆದ ವಾರವೇ ರಾಬಕೊವಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಚುನಾವಣೆ ಪೂರ್ಣಗೊಂಡಿದೆ. ಬಳ್ಳಾರಿ ಹೊರತುಪಡಿಸಿ ಮೂರು ಜಿಲ್ಲೆಯಿಂದ 12 ನಿರ್ದೇಶಕರು ಆಯ್ಕೆಯಾಗಿದ್ದಾರೆ. ಇದೇ ಜು 25 ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಕಳೆದ ಕೆಲ ವರ್ಷಗಳಿಂದ ಅಖಂಡ ಜಿಲ್ಲೆಯೇ ನಿರ್ದೇಶಕರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಈ ಬಾರಿ ಕೊಪ್ಪಳ ಹಾಗೂ ರಾಯಚೂರು ಅಭ್ಯರ್ಥಿಗಳಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬುದಾಗಿ ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಸಚಿವರ ಮೂಲಕ ಸರ್ಕಾರಕ್ಕೆ ಒತ್ತಡ ಏರುತ್ತಿದ್ದಾರೆ. ಸದ್ಯ ಒಕ್ಕೂಟಕ್ಕೆ ಹೊಸ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಆಯ್ಕೆಯಾದ ನಂತರ ಮಂಡಳಿ ಆರಂಭವಾಗಿ ಸದ್ಯ ಮೆಗಾಡೇರಿಗಾಗಿ ನಿಯೋಜನೆಗೊಂಡಿರುವ ಸರ್ಕಾರದ ಸ್ಥಳಕ್ಕೆ ಹಣ ನೀಡಲು ಹೊಸ ಬೋರ್ಡ್ ಒಪ್ಪುವುದೇ ಅಥವಾ ತಿರಸ್ಕರಿಸುವುದೇ ಎಂಬುದು ಪ್ರಶ್ನೆಯಾಗಿದೆ.
ಮೀಸಲು ಸ್ಥಾನ ವಂಚಿತ : ರಾಬಕೊವಿ ಒಕ್ಕೂಟ ಕಚೇರಿ ಆರಂಭವಾಗಿ ಹಲವು ವರ್ಷಗಳೇ ಕಳೆದಿದೆ. ಅಲ್ಲದೆ, ಅಖಂಡ ಜಿಲ್ಲೆಯ ಹಲವರು ಒಕ್ಕೂಟದ ಅಧ್ಯಕ್ಷರಾಗಿ ಹಲವು ವರ್ಷ ಹುದ್ದೆ ಆಲಂಕರಿಸಿದ್ದಾರೆ. ಆದರೆ, ಯಾವ ಅಧ್ಯಕ್ಷರು ಬಳ್ಳಾರಿಗೆ ನಿರ್ದೇಶಕರ ಸ್ಥಾನಕ್ಕೆ ಮೀಸಲು ಕಲ್ಪಿಸದೆ ಇದ್ದರಿಂದ ಈ ಬಾರಿ ನಿರ್ದೇಶಕ ಸ್ಥಾನದಿಂದ ವಂಚಿತರಾಗಿದ್ದಾರೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಒಕ್ಕೂಟದಿಂದ ಯಾವುದೇ ನಿರ್ಧಾರಕ್ಕೆ ಅಕ್ಷೇಪಣೆ ಸಲ್ಲಿಸಲು ಯಾರಿಲ್ಲ. ಇದರಿಂದ ಕೆಲವೊಂದು ಒಕ್ಕೂಟದ ಅಭಿವೃದ್ಧಿ ಯೋಜನೆಗಳು ಬೇರೆ ಜಿಲ್ಲೆಗಳಿಗೆ ವರ್ಗಾವಣೆಗೊಂಡರೂ ಆಶ್ಚರ್ಯವಿಲ್ಲ.
ಕೋಟ್... ಮೆಗಾಡೇರಿ ನಿರ್ಮಾಣಕ್ಕೆ ಜಿಲ್ಲಾಡಳಿತ ಸ್ಥಳ ಗುರುತಿಸಿದೆ. ಭೂಮಿ ಬೆಲೆಯ ಶೇ. ಅರ್ಧದಷ್ಟು ಬೋರ್ಡ್ ಸರ್ಕಾರಕ್ಕೆ ನೀಡಬೇಕಿದೆ. ಹಣ ನೀಡಿದರೆ ಮೆಗಾಡೇರಿಗೆ ಸ್ಥಳ ದೊರೆಯಲಿದೆ.
- ಮಹಮ್ಮದ್ ಎನ್.ಜುಬೇರ್, ಆಡಳಿತಾಧಿಕಾರಿ, ರಾಬಕೊವಿ ಒಕ್ಕೂಟ, ಬಳ್ಳಾರಿ.