ಬಳ್ಳಾರಿ ; ನಗರದಲ್ಲಿ ಕ್ರಿಕೆಟ್ ಮೈದಾನ ಸೇರಿದಂತೆ ಕ್ರೀಡೆಗಳಿಗೆ ಮೂಲಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಎಸ್.ಎಸ್. ಕ್ರಿಕೆಟ್ ಕ್ಲಬ್ ಅಧ್ಯಕ್ಷ ಎಸ್.ಎಸ್.ಮೆಹಬೂಬ್ ಬಾಷ ಅವರು 51ನೇ ವಯಸ್ಸಿನಲ್ಲಿ ಜಿಲ್ಲೆಯಿಂದ ಬೆಂಗಳೂರಿಗೆ ’ಮ್ಯಾರಥಾನ್ ಓಟ’ ಕೈಗೊಳ್ಳುವ ಮೂಲಕ ಸೋಮವಾರ ಪ್ರತಿಭಟನೆ ಆರಂಭಿಸಿದರು.
ಎಸ್.ಎಸ್.ಮೆಹಬೂಬ್ ಬಾಷ ಮಾತನಾಡಿ, ಬಳ್ಳಾರಿ ನಗರದಲ್ಲಿ ಕ್ರಿಕೆಟ್ ಆಟಕ್ಕೆ ಮೈದಾನ ಸೇರಿ ಮೂಲಸೌಲಭ್ಯಗಳೇ ಇಲ್ಲ. ಬಳ್ಳಾರಿಯಲ್ಲಿ ಸಾಕಷ್ಟು ಜನ ಪ್ರತಿಭಾವಂತ ಕ್ರಿಕೆಟ್ ಆಟಗಾರರಿದ್ದಾರೆ. ಆದರೆ, ಪ್ರತಿಭೆ ಪ್ರದರ್ಶನಕ್ಕೆ ಮೈದಾನ ಸೇರಿ ಮೂಲಭೂತ ಸೌಲಭ್ಯಗಳೇ ಇಲ್ಲ. ಹಾಗಾಗಿ ಜಿಲ್ಲೆಯಿಂದ ’ಮ್ಯಾರಥಾನ ಓಟ’ದ ಮೂಲಕ ಬೆಂಗಳೂರಿಗೆ ತೆರಳಿ, ಅಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗೆ ಮನವಿ ಸಲ್ಲಿಸಿ, ಕ್ರಿಕೆಟ್‌ಗೆ ಮೈದಾನ ಸೇರಿ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಲಾಗುವುದು. ಪ್ರತಿದಿನ ಬೆಳಗ್ಗೆ 20 ಕಿ.ಮೀ, ಸಂಜೆ 20 ಕಿ.ಮೀ ಒಟ್ಟು 40 ಕಿ.ಮೀಗಳಂತೆ ಓಟವನ್ನು ನಡೆಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿರುವೆ ಎಂದರು.
ಎಸ್.ಎಸ್.ಕ್ರಿಕೆಟ್ ಕ್ಲಬ್ ಉಪಾಧ್ಯಕ್ಷ ಎಂ.ಪ್ರಭಂಜನ ಕುಮಾರ ಮಾತನಾಡಿ, ಕ್ರಿಕೆಟ್‌ಗಾಗಿ ಬೆಂಗಳೂರಿಗೆ ಓಟ ಕೈಗೊಂಡಿರುವ ಮೆಹಬೂಬ್ ಬಾಷ ಅವರು ಮೊದಲಿನಿಂದಲೂ ಕ್ರಿಕೆಟ್ ಗಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೆ, ಸಾಕಷ್ಟು ಮಕ್ಕಳಿಗೆ ಕ್ರಿಕೆಟ್ ಕಲಿಸುತ್ತಿದ್ದಾರೆ. ಆದರೆ, ಬಳ್ಳಾರಿಯಲ್ಲಿ ಸಮರ್ಪಕವಾದ ಮೂಲಸೌಲಭ್ಯಗಳೇ ಇಲ್ಲ. ವಿವಿಧ ಯೋಜನೆಗಳಲ್ಲಿ ಸಾಕಷ್ಟು ಅನುದಾನವಿದೆ. ಆದರೆ, ಅವುಗಳ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ. ಮುಂದಿನ ದಿನಗಳಲ್ಲಾದರೂ ಮಾಡಬೇಕಾಗಿದೆ ಎಂದರು.