ಜಿಲ್ಲೆ

ಬಳಕೆದಾರ ಸಂಘಗಳಿಗೆ ಕೆರೆ ನಿರ್ವಹಣೆ ಹೊಣೆ ವಹಿಸಿ

ಚಿತ್ರದುರ್ಗ: ಕೆರೆಗಳ ನಿರ್ವಹಣೆ, ಸಂರಕ್ಷಣೆ ಜವಾಬ್ದಾರಿಯನ್ನು ಸಮುದಾಯ ಆಧಾರಿತ ಕೆರೆ ಬಳಕೆದಾರರ ಸಂಘಗಳಿಗೆ ವಹಿಸುವುದೂ ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂಟ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಸೀಬಾರದ ಎಸ್. ನಿಜಲಿಂಗಪ್ಪ ಸ್ಮಾರಕದಲ್ಲಿ  ಆಯೋಜಿಸಿದ್ದ ಸಭೆಯಲ್ಲಿ ಮೀನು ಸಾಕಣೆ ಹಕ್ಕು ಕೊಡಬೇಕು, ಕೆರೆಗಳ ಒತ್ತುವರಿ ಸಮೀಕ್ಷೆ ವೇಳೆ ಮಾಹಿತಿ ಹಾಗೂ ಕೆರೆ ಬಳಕೆದಾರರ ಸಂಘಗಳ ನವೀಕರಣಕ್ಕೆ ಸಂಘಗಳಲ್ಲಿ ಇರುವಂಥ ಹಣವನ್ನು ಬಿಡುಗಡೆಗೊಳಿಸಲು ಸಂಬಂಧಿಸಿದ ಇಲಾಖೆಗಳು ಅನುಮತಿ ಕೊಡಬೇಕೆಂದು ಒತ್ತಾಯಿಸಿ ಸಭೆ ನಿರ್ಣಯ ಅಂಗೀಕರಿಸಿದೆ.

ಸಭೆಯಲ್ಲಿ ಮಾತನಾಡಿದ ನಾನಾ ಪದಾಧಿಕಾರಿಗಳು, ಕೆರೆ ಒತ್ತುವರಿ ತೆರವು ಕುರಿತು, ಅವೈಜ್ಞಾನಿಕವಾಗಿ ಹೂಳೆತ್ತುವ ಹಾಗೂ ಕೆರೆ ಏರಿಗಳ ಜಂಗಲ್‌ಕಟ್ಟಿಂಗ್ ಕುರಿತಂತೆ ಮಾತನಾಡಿದರು.

ಈ ಕುರಿತು ಅಧಿಕಾರಿಗಳು ಅನುದಾನವಿಲ್ಲ ಎನ್ನುತ್ತಾರೆ. ಕೆರೆಗಳ ನಿರ್ವಹಣೆ, ರಕ್ಷಣೆ ನಿಟ್ಟಿನಲ್ಲಿ ಅಧಿಕಾರಿಗಳು ಸಮುದಾಯದ ಸಹಭಾಗಿತ್ವದೆಡೆ ಅಸಹನೆ ಹೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೀಮಸಮುದ್ರ ಜಿ.ಎಸ್. ಮಂಜುನಾಥ್, ಒಕ್ಕೂಟದ ಅಧ್ಯಕ್ಷ ಬಿ. ನಾಗರಾಜಯ್ಯ, ಉಪಾಧ್ಯಕ್ಷ ಬಿ.ಎಸ್. ಅಯ್ಯಣ್ಣ, ಕಾರ್ಯದರ್ಶಿ ಸಿ.ಆರ್. ನಾಗರಾಜ್ ಸೇರಿ ನಾನಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಇತರರು ಇದ್ದರು.