ಗೋಣಿಕೊಪ್ಪ: ಆಕ್ಸ್ ಸ್ಪೋರ್ಟ್ಸ್ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಅಸೋಸಿಯೇಷನ್ ಹಾಗೂ ಅಜ್ಜಿಕುಟ್ಟೀರ ಸುಬ್ಬಯ್ಯ, ಪೊನ್ನಮ್ಮ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಸಿಕ್ಸ್ ಎ ಸೈಡ್ ಕೊಡವ ಕೌಟುಂಬಿಕ ಫುಟ್ಬಾಲ್‌ನಲ್ಲಿ ಬಲ್ಲಚಂಡ, ಥ್ರೋಬಾಲ್‌ನಲ್ಲಿ ಆದೇಂಗಡ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿತು.
ಭಾನುವಾರ ತಡರಾತ್ರಿ ಹೊನಲು ಬೆಳಕಿನಲ್ಲಿ ನಡೆದ ಫುಟ್ಬಾಲ್ ಫೈನಲ್ ಹಣಾಹಣಿಯಲ್ಲಿ ಬಲ್ಲಚಂಡ ತಂಡದ ವಿರುದ್ಧ ಸೋಲನುಭ ವಿಸಿದ ಕಳ್ಳಿಚಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ಬಲ್ಲಚಂಡ 4-0 ಗೋಲುಗಳಿಂದ ಮಣಿಸಿತು. ಬಲ್ಲಚಂಡ ಗಾನಾ 3 ಗೋಲು ಸಿಡಿಸಿ ಗೆಲುವಿನ ರೂವಾರಿಯಾದರು. ಬಲ್ಲಚಂಡ ಪೊನ್ನಪ್ಪ 1 ಗೋಲು ಹೊಡೆದು ಗೆಲುವಿನ ಅಂತರ ಹಿಗ್ಗಿಸಿದರು.
ಇದಕ್ಕೂ ಮುನ್ನ ನಡೆದ ಸೆಮಿ ಫೈನಲ್‌ನಲ್ಲಿ ಬಲ್ಲಚಂಡ ತಂಡವು ಪೆನಾಲ್ಟಿ ಶೂಟೌಟ್ ಮೂಲಕ 3-2 ಗೋಲುಗಳ ಅಂತರದಲ್ಲಿ ಪಾಂಡಂಡವನ್ನು ಮಣಿಸಿತು. ಉಭಯ ತಂಡಗಳು ನಿಗದಿತ ಸಮಯದಲ್ಲಿ ಗೋಲು ದಾಖಲಿಸದೆ ಪರದಾಡಿತು. ಮತ್ತೊಂದು ಸೆಮಿ ಫೈನಲ್‌ನಲ್ಲಿ ಕಳ್ಳಿಚಂಡ ತಂಡವು ಚೌರೀರವನ್ನು 3-1 ಗೋಲುಗಳಿಂದ ಸೋಲಿಸಿತು. ಕಳ್ಳಿಚಂಡ ಸಾವನ್, ಬೋಪಣ್ಣ, ಕಂಡೃತಂಡ ತಮನ್ ಕಾರ್ಯಪ್ಪ, ಚೌರೀರ ಪೊನ್ನಣ್ಣ ತಲಾ ಒಂದೊಂದು ಗೋಲು ದಾಖಲಿಸಿದರು.
ಆದೇಂಗಡ ಥ್ರೋಬಾಲ್ ಚಾಂಪಿಯನ್: ಆದೇಂಗಡ ತಂಡವು ಮೂಕಳೇರವನ್ನು 2-1 ಸೆಟ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. 11-15, 15-10, 15-7 ಅಂಕಗಳ ಮೂಲಕ ಗೆಲುವು ಪಡೆಯಿತು. ಸೋಲನುಭವಿಸಿದ ಮೂಕಳೇರ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಸೆಮಿ ಫೈನಲ್‌ನಲ್ಲಿ ಆದೇಂಗಡ ತಂಡವು (ಬೆಳ್ಳೂರು-ಹರಿಹರ) ಮುಕ್ಕಾಟೀರ ತಂಡವನ್ನು 9-15, 16-14, 15-9 ಅಂಕಗಳಿಂದ ಮಣಿಸಿ, ರೋಚಕ ಪಂದ್ಯಕ್ಕೆ ಸಾಕ್ಷಿಯಾಯಿತು. ಮತ್ತೊಂದು ಸೆಮಿ ಫೈನಲ್‌ನಲ್ಲಿ ಮೂಕಳೇರ ತಂಡವು (ಬೆಳ್ಳೂರು-ಹರಿಹರ) ಬಾಚೀರವನ್ನು 15-12, 15-9 ನೇರ ಸೆಟ್‌ಗಳಿಂದ ಮಣಿಸಿತು.
3 ದಿನ ನಡೆದ ಟೂರ್ನಿಯಲ್ಲಿ 42 ಫುಟ್ಬಾಲ್ ತಂಡ, 15 ಥ್ರೋಬಾಲ್ ತಂಡಗಳು ಭಾಗವಹಿಸಿದವು.