ಜಿಲ್ಲೆ

ಬಲೆಗೆ ಬಿತ್ತು ನರಭಕ್ಷಕ ವ್ಯಾಘ್ರ

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ಜೋಡಿ ನರಬಲಿ ಪಡೆದ ವ್ಯಾಘ್ರ ಸೇರಿದಂತೆ ಎರಡು ಹುಲಿಗಳನ್ನು ನಾಗರಹೊಳೆ ಉದ್ಯಾನವನದ ಅಂಚಿನಲ್ಲಿ ಮಂಗಳವಾರ ಅರಣ್ಯ ಇಲಾಖೆ ಕಾರ್ಯಾಚರಣೆ ತಂಡ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.


10 ರಿಂದ 11 ಪ್ರಾಯದ ಎರಡು ಹೆಣ್ಣು ಹುಲಿಗಳನ್ನು ನಾಣಚ್ಚಿ ಗೇಟ್ ಮತ್ತು ಡಿ.ಬಿ.ಕುಪ್ಪೆ ಎಂಬಲ್ಲಿ ಪ್ರತ್ಯೇಕವಾಗಿ ಸೆರೆ ಹಿಡಿಯಲಾಯಿತು. ಇದರಿಂದ ಆತಂಕದಲ್ಲಿ ಕಾಲದೂಡುತ್ತಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಎರಡೂ ಹುಲಿಗಳನ್ನು ಮೈಸೂರಿನ ಕೂರ್ಗಳ್ಳಿ ಹುಲಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಯಿತು.


ಮಂಗಳವಾರ ಮಧ್ಯಾಹ್ನ 2.30 ಗಂಟೆ ಸುಮಾರಿಗೆ ನಾಣಚ್ಚಿ ಎಂಬಲ್ಲಿ ಅರಿವಳಿಕೆ ನೀಡಿ ನರಭಕ್ಷಕತ ಹೆಣ್ಣು ಹುಲಿಯನ್ನು ಜೀವಂತವಾಗಿ ಹಿಡಿಯಲಾಯಿತು. ದೇಹದಲ್ಲಿ ಕಾದಾಡಿದ ಗಾಯಗಳಿದ್ದು, ಅರಣ್ಯದಲ್ಲಿ ಆಹಾರವಿಲ್ಲದೆ ಗ್ರಾಮಕ್ಕೆ ಬಂದಿದೆ. ಸುಲಭವಾಗಿ ಬೇಟೆಯಾಡಲು ಸಾಧ್ಯವಾಗದೆ ನರಬಲಿಗೆ ಮುಂದಾಗಿರಬಹುದೆಂದು ಶಂಕಿಸಲಾಗಿದೆ. ಮೇಲಿನ ಕೋರೆ ಹಲ್ಲು ಕೂಡ ಅರ್ಧ ಭಾಗ ಮುರಿದು ಹೋಗಿರುವುದು ಕಂಡುಬಂದಿದೆ.


ಇದರ ಬೆನ್ನಲ್ಲೇ ಡಿ.ಬಿ.ಕುಪ್ಪೆ ಎಂಬಲ್ಲಿ ಮತ್ತೊಂದು ಹುಲಿಯನ್ನು ಹಿಡಿಯಲಾಗಿದೆ. ಜನರಲ್ಲಿ ಭೀತಿ ಹುಟ್ಟಿಸಿ, ಉಪಟಳ ನೀಡುತ್ತಿದ್ದ ಹುಲಿಗಳನ್ನು ಏಕಕಾಲದ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.


ಹಿನ್ನೆಲೆ: ನೆಲ್ಲೀರ ಪೂಣಚ್ಚ ಎಂಬುವರಿಗೆ ಸೇರಿದ ಕಾಫಿ ತೋಟದ ಲೈನ್‌ಮನೆ ಸಮೀಪ ಭಾನುವಾರ ಬಾಲಕ ಚೇತನ್ ಎಂಬಾತನನ್ನು, ಸೋಮವಾರ ಮುಂಜಾನೆ 60 ವರ್ಷದ ರಾಜು ಎಂಬುವರನ್ನು ಬಲಿ ತೆಗೆದುಕೊಂಡಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಗಿತ್ತು. ಸೋಮವಾರ ಮಧ್ಯಾಹ್ನದಿಂದಲೇ ಕಾರ್ಯಾಚರಣೆ ಆರಂಭಿಸಿತ್ತು. ಮಂಗಳವಾರ ಸಾಕಾನೆಗಳೊಂದಿಗೆ ಶ್ವಾನದಳವನ್ನು ಕೂಡ ಪತ್ತೆ ಕಾರ್ಯಕ್ಕೆ ಬಳಸಿಕೊಳ್ಳಲಾಯಿತು. ಅಭಿಮನ್ಯು, ಅಶ್ವತ್ಥಾಮ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಸಾಕಾನೆಗಳಾದ ಭೀಮ, ಶ್ರೀಕಂಠ, ಗಣೇಶ ಆನೆಗಳು ಕೂಂಬಿಂಗ್‌ನಲ್ಲಿ ಭಾಗವಹಿಸಿದ್ದವು. 150 ಸಿಬ್ಬಂದಿ, ನಾಲ್ವರು ಪಶು ವೈದ್ಯರು, 20 ಕೋವಿಗಳನ್ನು ಕಾರ್ಯಾಚರಣೆಗೆ ಬಳಸಲಾಯಿತು.


ಸ್ಥಳದಲ್ಲಿದ್ದ ಕೊಡಗು ವೃತ್ತ ಮುಖ್ಯ ಸಂರಕ್ಷಣಾಧಿಕಾರಿ ನಿರಂಜನ್‌ಮೂರ್ತಿ ಮಾತನಾಡಿ, ಈ ಹುಲಿಗಳು ಮಾನವ ಪ್ರಾಣಹಾನಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸೆರೆ ಹಿಡಿಯಲಾಗಿದೆ ಎಂದು ಸ್ಪಷ್ಟಪಡಿಸಿದರು.
ನಾಗರಹೊಳೆ ನಿರ್ದೇಶಕ ಹರ್ಷಕುಮಾರ್, ವನ್ಯಜೀವಿ ಎಪಿಸಿಸಿಎಫ್ ಕುಮಾರ್ ಪುಷ್ಕರ್, ಹುಲಿ ಯೋಜನೆ ಪಿಸಿಸಿಎಫ್ ಜಗತ್‌ರಾಮ್, ನಾಗರಹೊಳೆ ಎಸಿಎಫ್ ಗೋಪಾಲ್ ಇತರರಿದ್ದರು.