ಜಿಲ್ಲೆ

ಬಲಿಗಾಗಿ ಕಾದಿವೆ ಒಣಗಿದ ಮರಗಳು

ಚನ್ನರಾಯಪಟ್ಟಣ: ಪಟ್ಟಣದ ಹೃದಯಭಾಗ ಸೇರಿದಂತೆ 23 ವಾರ್ಡ್‌ಗಳ ವಿವಿಧ ಬಡಾವಣೆಗಳ ಹಲವು ರಸ್ತೆಗಳಲ್ಲಿ ಒಣಗಿದ ಮರಗಳು ಬಲಿಗಾಗಿ ಕಾದು ನಿಂತಿವೆ. ಮರಗಳ ರೆಂಬೆ-ಕೊಂಬೆಗಳು ಒಣಗಿ ನೇತಾಡುತ್ತಿದ್ದರೂ ಮರಗಳನ್ನು ತೆರವು ಮಾಡದೆ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ.

ಸದ್ಯ ಪಟ್ಟಣದಲ್ಲಿ ಬದಲಾದ ವಾತಾವರಣದಿಂದ ಗಾಳಿ ಹಾಗೂ ಬಿಸಿಲು ಹೆಚ್ಚಾಗಿದ್ದು, ಒಣಗಿದ ಮರ ಅಥವಾ ಕೊಂಬೆಗಳನ್ನು ತೆರವು ಮಾಡಬೇಕಿದೆ. ಈ ಹಿಂದೆ ಒಣಗಿದ ಮರಗಳಿಂದ ಸಾಕಷ್ಟು ಅವಾಂತರಗಳು ಸಂಭವಿಸಿದ್ದರೂ ಪುರಸಭೆ ಮೌನ ವಹಿಸಿದೆ. ಅರಣ್ಯ ಇಲಾಖೆ ಕೂಡ ಈ ಬಗ್ಗೆ ಮೌನವಾಗಿರುವುದು ವಿಪರ್ಯಾಸ.

ಹತ್ತು ದಿನಗಳ ಹಿಂದೆ ಒಂದು ಗಂಟೆ ಕಾಲ ಸುರಿದ ಮಳೆಗೆ ಮುನ್ನ ಬೀಸಿದ ಬಲವಾದ ಗಾಳಿಗೆ ಹಾಸನ- ಮಂಗಳೂರು ಸಂಪರ್ಕ ಕಲ್ಪಿಸುವ ಚನ್ನರಾಯಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಎದುರಿಗಿದ್ದ ಬೃಹತ್ ಗಾತ್ರದ ಮರ ಬಿದ್ದಿದ್ದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಉಂಟಾಯಿತು. ಮರ ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕವೂ ಕೂಡ ಕಡಿತಗೊಂಡಿದ್ದರಿಂದ ಮರ ತೆರವಿಗೆ ಅನನುಕೂಲ ಉಂಟಾಯಿತು. ಪೊಲೀಸರು ಮತ್ತು ಪುರಸಭಾ ಸಿಬ್ಬಂದಿ ಹಾಗೂ ಕೆಪಿಟಿಸಿಎಲ್ ಸಿಬ್ಬಂದಿ ಮರ ತೆರವುಗೊಳಿಸಲು ಹರಸಾಹಸಪಟ್ಟರು.

ವಿಶೇಷವೆಂದರೆ ಈ ಮರವನ್ನು ತೆರವುಗೊಳಿಸಬೇಕು ಎಂದು ಪುರಸಭೆ ಅರಣ್ಯ ಇಲಾಖೆಯವರಿಗೆ ಮನವಿ ಮಾಡಿತ್ತು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಹೀಗಾಗಿ ಪುರಸಭೆ ಅಧಿಕಾರಿಗಳು ಅಸಹಾಯಕರಾಗಿ ಕೂರಬೇಕಾಯಿತು. ಅಂತಿಮವಾಗಿ ಗಾಳಿಯ ಹೊಡೆತಕ್ಕೆ ಒಣಗಿದ ಮರ ಧರೆಗುರುಳಿದೆ. ಎರಡೂ ಇಲಾಖೆಗಳಲ್ಲಿ ಸಮನ್ವಯತೆ ಇಲ್ಲದ ಕಾರಣ ಹಾಗೂ ಅವರ ತಿಕ್ಕಾಟದಿಂದ ಅಂತಿಮವಾಗಿ ಸಾರ್ವಜನಿಕರು ಸಂಕಷ್ಟಕ್ಕೊಳಗಾಗಬೇಕಾಯಿತು.

ಮರ ತೆರವಿಗೆ ಪ್ರತಿ ವಾರ 2-3 ಅರ್ಜಿ: ನಮ್ಮ ಮನೆಯ ಮುಂದೆ ಮರದಲ್ಲಿ ಕೊಂಬೆಯೊಂದು ಒಣಗಿದೆ, ನಮ್ಮ ಮಳಿಗೆಯ ಮುಂದೆ ಒಣಗಿದ ಮರವಿದೆ, ಪ್ರಮುಖ ರಸ್ತೆಯಲ್ಲಿ ಮರ ಬೀಳುವ ಸ್ಥಿತಿಯಲ್ಲಿದೆ, ನಮ್ಮ ಶಾಲೆಯ ಆವರಣದಲ್ಲಿ ಮರವೊಂದು ಒಣಗಿದ್ದು, ಯಾವ ಗಳಿಗೆಯಲ್ಲಿ ಬೇಕಿದ್ದರೂ ಬೀಳುವ ಸ್ಥಿತಿಯಲ್ಲಿದೆ ಹೀಗೆ ಪುರಸಭೆಗೆ ವಾರಕ್ಕೆ ಸಾರ್ವಜನಿಕರಿಂದ ಕನಿಷ್ಠ 2ರಿಂದ 3 ದೂರುಗಳ ಅರ್ಜಿ ಬರುತ್ತವೆ.

ಸಣ್ಣಪುಟ್ಟ ಕೊಂಬೆಗಳಾಗಿದ್ದರೆ ಪುರಸಭೆಯ ಸಿಬ್ಬಂದಿ ಅವುಗಳನ್ನು ತಕ್ಷಣವೇ ತೆರವುಗೊಳಿಸುವ ಕೆಲಸ ಮಾಡುತ್ತಾರೆ. ಆದರೆ, ಒಣಗಿರುವ ದೊಡ್ಡ ಕೊಂಬೆಗಳು ಅಥವಾ ಮರಗಳನ್ನು ತೆರವುಗೊಳಿಸಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ. ಹೀಗಾಗಿ ಪುರಸಭೆಯ ಅಧಿಕಾರಿಗಳು ಅಂತಹ ಅರ್ಜಿಗಳನ್ನು ಅರಣ್ಯ ಇಲಾಖೆಗೆ ಕಳುಹಿಸಿ ಸುಮ್ಮನಾಗುತ್ತಾರೆ. ಆದರೆ, ಬರುವ ಅರ್ಜಿಗಳ ವಿಲೇವಾರಿಗೆ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುವುದಿಲ್ಲ. ಅಷ್ಟೇಕೆ ಕೆಲ ಪ್ರಕರಣಗಳಲ್ಲಿ ಮೂರು ತಿಂಗಳಾದರೂ ಅರಣ್ಯ ಇಲಾಖೆ ಅರ್ಜಿಗಳನ್ನು ವಿಲೇವಾರಿ ಮಾಡುವ ಗೋಜಿಗೆ ಹೋಗುವುದಿಲ್ಲ.

ಹೀಗಾಗಿ ಪುರಸಭೆಯ ಅಧಿಕಾರಿಗಳು ಏನೂ ಮಾಡಲಾಗದೆ ಅಸಹಾಯಕ ಪರಿಸ್ಥಿತಿಯಲ್ಲಿ ಇರುವಂತಾಗುತ್ತದೆ. ಅರಣ್ಯ ಇಲಾಖೆ ಅನುಮತಿ ಇಲ್ಲದೆ ಪುರಸಭೆಯ ಅಧಿಕಾರಿಗಳು ಒಣ ಮರಗಳ ತೆರವಿಗೆ ಮುಂದಾದರೆ, ಅವರ ವಿರುದ್ಧ ಎಫ್‌ಐಆರ್ ದಾಖಲಾಗುವ ಸಾಧ್ಯತೆ ಇದೆ. ಯಾವುದೇ ಮರ ಒಣಗಿರಲಿ ಅಥವಾ ಹಸಿಯಾಗಿರಲಿ ಅರಣ್ಯ ಇಲಾಖೆ ಅದನ್ನು ಆಸ್ತಿ ಎಂದೇ ಪರಿಗಣಿಸುತ್ತದೆ. ಅದನ್ನು ಸಾರ್ವಜನಿಕವಾಗಿ ಹರಾಜು ಹಾಕಿದ ನಂತರವಷ್ಟೇ ಮರವನ್ನು ಕಡಿಯಬೇಕು ಎಂದು ಅರಣ್ಯ ಇಲಾಖೆ ಹೇಳುತ್ತದೆ ಎಂಬುದಾಗಿ ಪುರಸಭೆಯ ಅಧಿಕಾರಿಗಳು ಹೇಳುತ್ತಾರೆ.

ಆತಂಕದಲ್ಲಿ ವಾಹನ ಸವಾರರು: ಪಟ್ಟಣದಾದ್ಯಂತ ಸಾಕಷ್ಟು ಮರಗಳು ಒಣಗಿ ನಿಂತು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಅವುಗಳನ್ನು ತೆರವು ಮಾಡಲು ಮುಂದಾಗುತ್ತಿಲ್ಲ. ಹೀಗಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಸವಾರರು ಹಾಗೂ ಜನರು ಆತಂಕದಿಂದಲೇ ಮರಗಳನ್ನು ನೋಡುತ್ತಾ ಹೋಗಬೇಕಿದೆ. ಈಗಲಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ದೂರು ಅರ್ಜಿಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡಬೇಕಿದೆ.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ, ಆದರೆ ಪಟ್ಟಣದಾದ್ಯಂತ ಹಲವಾರು ಮರಗಳು ಒಣಗಿ ನಿಂತಿದೆ. ಅಕಾಲಿಕ ಮಳೆ ಸುರಿಯುತ್ತಿದ್ದು, ಮಳೆಗಾಳಿಗೆ ಒಣಗಿದ ಮರಗಳು ಉರುಳಿ ಬೀಳುವ ಸಾಧ್ಯತೆಗಳಿವೆ. ಈ ಮಾರ್ಗದಲ್ಲಿ ನಿರಂತರವಾಗಿ ವಾಹನಗಳು ಸಂಚರಿಸುವುದರಿಂದ ಮರ ಬಿದ್ದರೆ ಅನಾಹುತ ಸಂಭವಿಸುತ್ತದೆ. ಈ ಕುರಿತು ಪುರಸಭೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಅನಾಹುತಗಳು ಸಂಭವಿಸುವ ಮೊದಲು ಈ ಮರವನ್ನು ತೆರವುಗೊಳಿಸುವುದು ಅತಿ ಅವಶ್ಯವಿದೆ.