* ರಾಜ್ಯ ಎಸ್‌ಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ ಆಗ್ರಹ
ರಾಮನಗರ
ಸದಾಶಿವ ಆಯೋಗ ಸೇರಿ ಸಂಪುಟ ಉಪ ಸಮಿತಿ ವರದಿಗಳಲ್ಲಿ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಮುಂದೆ ನಡೆಯುವ ಜಾತಿ ಗಣತಿಯಲ್ಲಿ ಸರಿಪಡಿಸಿಕೊಳ್ಳಲೇಬೇಕು ಎಂದು ರಾಜ್ಯ ಎಸ್ಸಿ , ಎಸ್ಟಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ ತಿಳಿಸಿದರು.
ನ್ಯಾ.ನಾಗಮೋಹನ್‌ದಾಸ್ ಏಕ ಸದಸ್ಯ ಆಯೋಗದ ಶಿಫಾರಸ್ಸಿನಂತೆ ಒಳಮೀಸಲಾತಿ ಜಾರಿಗಾಗಿ ಶೀಘ್ರದಲ್ಲೆ ನಡೆಯಲಿರುವ ಜಾತಿ ಗಣತಿ ಕುರಿತು ಬಲಗೈ ಸಮುದಾಯದಲ್ಲಿ ಅರಿವು ಮೂಡಿಸಲು ರಾಮನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಹೊಲೆಯ, ಬಲಗೈ ಸಂಬಂಧಿತ ಜಾತಿಗಳ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.
ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬುದು ಜಾತಿ ಅಲ್ಲ. ಜಾತಿ ಗಣತಿಯಲ್ಲಿ ಈ ಸಂಬಂಧ ಯಾವುದೇ ಗೊಂದಲ ಬೇಡ. ಜಾತಿ ಗಣತಿ ವೇಳೆ ಸ್ಪಷ್ಟವಾಗಿ ಜಾತಿಯನ್ನು ನಮೂದಿಸಬೇಕು. ಶೇ.100 ಮನೆಗಳನ್ನು ಜಾತಿ ಗಣತಿಗೆ ಒಳಪಡಿಸಬೇಕು. ಬಲಗೈ ಸಮುದಾಯದ ಪ್ರತಿಯೊಬ್ಬರ ಗಣತಿ ಆಗಬೇಕು ಎಂದರು.
ಜಾತಿ ಗಣತಿ ನಮೂನೆಯಲ್ಲಿ ಧರ್ಮದ ಕಾಲಂ ಇರುವುದಿಲ್ಲ. ಇದ್ದರೂ ಅದು ನಗಣ್ಯವಾಗಲಿದೆ. ಕೋಲಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಈ ವ್ಯಾಪ್ತಿಯಲ್ಲಿ ಜಾತಿ ಕಲಂನಲ್ಲಿ ಬಲಗೈ ಸಮುದಾಯಗಳು ಹೊಲೆಯ ಎಂದೇ ನಮೂದಿಸಿ, ಇದರ ಜತೆಗೆ ಬಲಗೈ, ಛಲವಾದಿ ಸಮುದಾಯ ಎಂದು ನಮೂದಿಸಬಹುದು. ನಂತರ ಉಪ ಜಾತಿ ಕೇಳಿದರೆ ಆದಿ ಕರ್ನಾಟಕ ಎಂದು ನಮೂದಿಸಬಹುದು. ಜಾತಿ ಕಲಂನಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಎಂದು ನಮೂದಿಸಿರುವುದರಿಂದಲೇ ಹಿಂದಿನ ವರದಿಗಳಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಇವುಗಳು ಜಾತಿ ಅಲ್ಲ. ಜಾತಿಯ ಕಲಂನಲ್ಲಿ ಬಲಗೈ, ಹೊಲೆಯ, ಛಲವಾದಿ ಸಮಯದಾಯ ಎಂದೇ ಹೇಳಿ, ತಪ್ಪದೆ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು ಎಂದರು.
ಜಾತಿ ಗಣತಿ ಸಂಬಂಧ ನಮ್ಮನ್ನು ಯಾರೇ ಪ್ರಚೋದಿಸಿದರೂ ಅದಕ್ಕೆ ಪ್ರತಿಕ್ರಿಯೆ ನೀಡುವುದು, ಸ್ಪಂದಿಸುವ ಅಗತ್ಯವಿಲ್ಲ. ಜಾತಿ ಗಣತಿಯ ನಂತರ ನಾವೆಲ್ಲರೂ ಒಂದೇ ಆಗಿರುತ್ತೇವೆ. ಯಾವುದೇ ಟೀಕೆ ಟಿಪ್ಪಣಿಗಳನ್ನು ಮಾಡುವ ಅಗತ್ಯವಿಲ್ಲ. ನಮ್ಮ ಸಮುದಾಯದ ಎಲ್ಲರೂ ತಪ್ಪದೆ ಜಾತಿ ಗಣತಿಗೆ ಒಳಪಡಲೇಬೇಕು, ಇದು ನಮ್ಮ ಮುಖ್ಯ ಕೆಲಸವಾಗಲಿ. ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ಪ್ರಶ್ನೆ. ಛಲವಾದಿ ಸಮುದಾಯ ಇನ್ನೂ ಮಲಗಿದೆ, ಎಚ್ಚೆತ್ತುಕೊಳ್ಳಬೇಕು. ಬಲಗೈ ಸಮುದಾಯ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆ. ಹಲವು ನ್ಯೂನತೆಗಳಿಂದ ಹಿಂದಿನ ವರದಿಗಳಲ್ಲಿ ನಮ್ಮ ಸಮುದಾಯವನ್ನು ಕಡಿಮೆ ಸಂಖ್ಯೆಯಲ್ಲಿ ತೋರಿಸಲಾಗಿದೆ. ಇದನ್ನು ಈ ಗಣತಿಯಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ಚಂದ್ರಶೇಖರಯ್ಯ ಕರೆ ನೀಡಿದರು.
ಪ್ರಸ್ತುತ ಗಣತಿಯಲ್ಲಿ ಮನೆ ಮನೆಗೆ ಬಂದು ಗಣತಿ ಕಾರ್ಯ ಮಾಡುವ ಜೊತೆಗೆ, ಬೂತ್ ಆಫಿಸ್ ಹಾಗೂ ಮೊಬೈಲ್ ಆಪ್ ಮೂಲಕವೂ ಗಣತಿ ಕಾರ್ಯ ನಡೆಯಲಿದೆ ಎಂದರು.
ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಹಾರೋಹಳ್ಳಿ ತಾಲೂಕಿನ ಮುಖಂಡರು, ನೌಕರರು, ನಿವೃತ್ತ ನೌಕರರು ಸೇರಿ ನೂರಾರು ಮಂದಿ ಭಾಗವಹಿಸಿದ್ದರು.