ಶಹಾಪುರದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಉದ್ಘಾಟಿಸಿದರು. ದೇಸಾಯಪ್ಪ ದೇಸಾಯಿ, ಮಾರ್ಥಂಡಪ್ಪ ಮುಂಡಾಸ, ರಾಘವೇಂದ್ರ ಹಾರಣಗೇರಾ, ಬಸವರಾಜ ಸಿನ್ನೂರು ಇತರರಿದ್ದರು. 
ಜಿಲ್ಲೆ

ಬರ‍್ರಕಥಾ ಉಳಿಸುವ ಕೆಲಸವಾಗಲಿ

ಶಹಾಪುರ: ವೈವಿಧ್ಯಮಯ ಕಲೆ, ನಾಟಕ, ನೃತ್ಯ, ಕಥನಗೀತೆ, ಭಾಷೆ, ಸಂಗೀತವನ್ನು ಒಳಗೊಂಡಿರುವ ಬುಡ್ಗಜಂಗಮ ಸಮುದಾಯ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಹೊಂದಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಹಾಗೂ ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಶರಣು ಗದ್ದುಗೆ ಹೇಳಿದರು.

ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಕಲ್ಯಾಣ ಮಂಟಪದಲ್ಲಿ ಭುವನೇಶ್ವರಿ ಬರ‍್ರಕಥಾ ಜಾನಪದ ಕಲಾವಿದರ ಸಂಘದಿAದ ಭಾನುವಾರ ಹಮ್ಮಿಕೊಂಡಿದ್ದ ಜಾನಪದ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬುಡ್ಗಜಂಗಮ ಸಮುದಾಯದ ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕೆಲಸಗಳು ಆಗಬೇಕಿದೆ. ವಿಶಿಷ್ಟ ಬರ‍್ರಕಥಾ ಕಲೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದರು.

ಬಡತನದಲ್ಲಿ ಬದುಕು ನಡೆಸುವ ಬುಡ್ಗಜಂಗಮ ಸಮುದಾಯ, ಕಲೆಯಲ್ಲಿ ಸಾಕಷ್ಟು ಶ್ರೀಮಂತಿಕೆಯನ್ನು ಹೊಂದಿದೆ. ದೇಶದ ವಿಶಿಷ್ಟ ಕೆಲಯಾಗಿರುವ ಬರ‍್ರಕಥಾ ಸಾಹಿತ್ಯವನ್ನು ಉಳಿಸಿಕೊಂಡು ಬಂದಿದೆ. ಮಹಾನ್ ಕಾವ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಪ್ರಸ್ತುತ ಪಡಿಸುವುದು ಸಣ್ಣ ಮಾತಲ್ಲ ಎಂದು ಶ್ಲಾಘಿಸಿದರು.

ಪ್ರಗತಿಪರ ಚಿಂತಕ ಶರಣು ದೋರನಹಳ್ಳಿ ಮಾತನಾಡಿ, ಬುಡ್ಗಜಂಗಮ ಸಮುದಾಯ ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತವಾಗಿದೆ. ಅಳಿವಿನಂಚಿನಲ್ಲಿರುವ ಸಮುದಾಯವನ್ನು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮುಖ್ಯವಾಹಿನಿಗೆ ತರಲು ಸಮುದಾಯ ಸಹಭಾಗಿತ್ವದ ಅಗತ್ಯವಾಗಿದೆ. ಜನಪ್ರತಿನಿಧಿಗಳು ಹಾಗೂ ಸರ್ಕಾರ ಸಮುದಾಯದ ಬಗ್ಗೆ ಚಿಂತನೆ ನಡೆಸಬೇಕು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಕಸಾಪ ತಾಲೂಕು ಅಧ್ಯಕ್ಷ ರವೀಂದ್ರನಾಥ ಎಸ್.ಹೊಸ್ಮನಿ ಪ್ರಾಸ್ತಾವಿಕ ಮಾತನಾಡಿದರು. ನಾಗನಟಗಿಯ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ಹಾಗೂ ವೆಂಕಟರೆಡ್ಡಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ಗೃಹಕ್ಷಕದಳ ಅಧಿಕಾರಿ ಮಾರ್ಥಂಡಪ್ಪ ಮುಂಡಾಸ, ಭುವನೇಶ್ವರಿ ಬರ‍್ರಕಥಾ ಜಾನಪದ ಕಲಾವಿದರ ಸಂಘದ ಅಧ್ಯಕ್ಷೆ ಲಕ್ಷ್ಮೀ ಬಾಯಿ ರೇವಲ್, ಕಾರ್ಯದರ್ಶಿ ವಿಜಯಲಕ್ಷ್ಮೀ ವೈ. ರೇವಲ್, ಪ್ರಮುಖರಾದ ದೇಸಾಯಪ್ಪ ದೇಸಾಯಿ ಹಳಿಸಗರ, ರಾಘವೇಂದ್ರ ಹಾರಣಗೇರಾ, ಬಸವರಾಜ ಸಿನ್ನೂರು, ಸಾಯಬಣ್ಣ ಪುರ್ಲೆ, ಹನುಮಂತರಾಯಗೌಡ ರಾಖಂಗೇರ, ಹನುಮಂತರಾಯ ದೊರೆ, ಭೀಮರಾಯ ಕದ್ರಾಪುರ್, ಯಮನಪ್ಪ ರೇವಲ್, ಬಸವರಾಜ ಕೆ., ಮರೆಪ್ಪ ವಿಭೂತಿ ಇತರರಿದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಮಲ್ಲಯ್ಯ ಸ್ವಾಮಿ ನಿರೂಪಣೆ ಮಾಡಿ ವಂದಿಸಿದರು.

ಜಾನಪದ ಲೋಕ ಅನಾವರಣ: ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಕಲ್ಯಾಣ ಮಂಟಪದಲ್ಲಿ ಜಾನಪದ ಲೋಕವೇ ಅನಾವರಣ ಆದಂತೆ ಭಾಸವಾಯಿತು. ಸಾಕಷ್ಟು ಗ್ರಾಮೀಣ ಕಲಾವಿದರ ಗ್ರಾಮೀಣ ಸೊಗಡಿನ ಹಾಡುಗಳನ್ನು ಪ್ರಸ್ತುತ ಪಡಿಸಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದರು. ಶರಣಮ್ಮ ಕೆ. ಅವರು ವೇದಿಕೆಯಲ್ಲಿ ಸಾಂಪ್ರದಾಯಿಕ ಪದಗಳನ್ನು ಪ್ರಸ್ತುತ ಪಡಿಸಿ ಎಲ್ಲರನ್ನು ಜಾನಪದ ಲೋಕಕ್ಕೆ ಕರೆದೊಯ್ದರು. ಇನ್ನುಳಿದಂತೆ ಸ್ನೇಹ ಪಾಟೀಲ್ ಭಕ್ತಿ ಗೀತೆ, ಮಲ್ಲಯ್ಯ ಸಿ.ಹಿರೇಮಠ ಸುಗಮ ಸಂಗೀತ, ಬೂದಯ್ಯ ಜಿ. ಹಿರೇಮಠ ಸಂಗೀತ ಗಾಯನ, ನೀಲಪ್ಪ ಡಿ. ಚೌದರಿ ಜಾನಪದ ಗಾಯನ, ಸಿದ್ರಾಮಪ್ಪ ಮಾಸ್ತರ್ ವಚನ ಗಾಯನ ಪ್ರಸ್ತುತ ಪಡಿಸಿದರು. ಮಲ್ಲಿಕಾರ್ಜುನ ತಬಲಾ, ಪ್ರಾಣೇಶ್ ಶಂಕು ಹಾರ್ಮೋನಿಯಂ ಸಾಥ್ ನೀಡಿದರು. ಭಾಗ್ಯಲಕ್ಷ್ಮಿ ಕಲಾತಂಡ ಹಾಗೂ ಆನಂದ ರೇವಲ್ ಅವರ ನೃತ್ಯ, ಅಂಜಲಿ ಭರತನಾಟ್ಯ ಗಮನಸೆಳೆಯಿತು.