ಜಿಲ್ಲೆ

ಬರ್ಬರ ಕೊಲೆಗಳ ಹಿಂದೆ ಆಸ್ತಿಯ ಜಗಳ

ರಾಮಚಂದ್ರ ಕಿಣಿ, ಭಟ್ಕಳ
ತಾಲೂಕಿನ ಹಾಡುವಳ್ಳಿ ಪಂಚಾಯಿತಿ ವ್ಯಾಪ್ತಿಯ ಹೊನ್ನಳ್ಳಿಯಲ್ಲಿ ಶುಕ್ರವಾರ ನಡೆದ ಬರ್ಬರ ಹತ್ಯೆ ಘಟನೆಯಿಂದ ಬೆಚ್ಚಿಬಿದ್ದ ಗ್ರಾಮಸ್ಥರು ಸಂಪೂರ್ಣ ನಲುಗಿಹೋಗಿದ್ದು ಇದರಿಂದ ಹೊರಬರಲು ಸಾದ್ಯವಾಗದೆ ವಿಚಲಿತರಾಗಿರುವ ಸನ್ನಿವೇಶ ಶನಿವಾರ ಗ್ರಾಮದಲ್ಲಿ ಕಂಡುಬಂತು.
ಶಂಭು ಭಟ್ ಕುಟುಂಬದ ನಾಲ್ವರ ಸಾವನ್ನು ಅವರ ಸಂಬಂಧಿಕರಿಗೆ ಮಾತ್ರವಲ್ಲ, ಸ್ವತಃ ಗ್ರಾಮಸ್ಥರಿಗೂ ಅರಗಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ ಎನ್ನುವದು ಅಲ್ಲಿನವರ ವರ್ತನೆಯಿಂದ ತಿಳಿದುಬರುತಿತ್ತು. ಸಾತ್ವಿಕ ಮನೋಬಾವದ ಭಟ್ಟರ ಕುಟುಂಬದ ಮೇಲೆ ಅವರದೆ ಸಂಬಂಧಿ ಸದಸ್ಯನೊರ್ವ ಈ ಪರಿಯ ಕ್ರೌರ್ಯ ಮೆರೆಯಲು ಕಾರಣವಾದರೂ ಏನು ಎನ್ನುವ ವಿಚಾರವೆ ಕರಾವಳಿಯಾದ್ಯಂತ ಸದ್ದು ಮಾಡುತ್ತಿದೆ. ಒಂಟಿ ಮನೆಯಲ್ಲಿ ವಾಸವಿದ್ದ ಕುಟುಂಬದ ಎಲ್ಲ ಸದಸ್ಯರೂ ಶವವಾಗಿದ್ದು ಸದ್ಯ ಇಬ್ಬರು ಪುಟಾಣಿಗಳು ಬಿಟ್ಟರೆ ಅಲ್ಲಿ ರೋಧಿಸಲು ಮತ್ಯಾರೂ ಉಳಿದಿಲ್ಲ. 4 ವರ್ಷದ ಪುಟ್ಟ ಕಂದಮ್ಮ ಬೆಳಗ್ಗೆ ಎದ್ದು ಅಮ್ಮ ಬೇಕು ತಂದು ಕೋಡಿ ಎಂದು ಅಳುವ ದೃಶ್ಯ ಮನಕಲುವಂತಿತ್ತು. 1ನೇ ತರಗತಿಯ ಪುಟ್ಟ ಬಾಲಕಿ ಈ ಘಟನೆಯಿಂದ ಸಂಪೂರ್ಣ ಕುಸಿದು ಹೋಗಿದ್ದು ಸಂಬಂಧಿಕರ ಸಮಧಾನಕ್ಕೂ ಸ್ಪಂದಿಸದೆ ಮೌನಕ್ಕೆ ಜಾರಿದ್ದಾಳೆ.
ಪೊಲೀಸ್‌ ಜೀಪಿನ ಸದ್ದು..
ಶಂಭು ಭಟ್ಟರ ಮನೆಯಲ್ಲಿ ಹತ್ಯೆ ನಡೆದ ಘಟನೆ ಶುಕ್ರವಾರ ಸಂಜೆ ಬೆಳಕಿಗೆ ಬಂದಿತ್ತು. ಬಳಿಕ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದರು. ಭಟ್ಟರ ಹಿರಿಯ ಸೊಸೆಯ ಅಪ್ಪನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು. ಬಳಿಕ ಪರಾರಿಯಾದ ಮುಖ್ಯ ಆರೋಪಿ ವಿನಯ ಭಟ್ಟನ ಶೋಧಕ್ಕೆ ವಿಶೇಷ ಪಡೆಯನ್ನು ಪೊಲೀಸರು ರಚಸಿದ್ದರು. ತನಿಖೆಯ ಮುಂದಿನ ಭಾಗವಾದ ಫಾರೆನ್ಸಿಕ್ ತಂಡ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದೆ. ವಿವಿಧ ಭಾಗದಲ್ಲಿ ಶವ ಪತ್ತೆಯಾದ ಸ್ಥಳ, ಮನೆಯ ಆವರಣ ಶೋಧಿಸಿ ಸಾಕ್ಷ್ಯ ಸಂಗ್ರಹಿಸಿದೆ. ಬಳಿಕ ಹಲ್ಯಾಣಿಯ ಆರೋಪಿಯ ಮನೆಗೆ ತೆರಳಿ ಆತ ಬಳಿಸಿದ ಕಾರು, ಅವನ ಬೆರಳಚ್ಚು ಸೇರಿ ಇತರ ಮಾಹಿತಿಯನ್ನು ಪಡೆದು ಮಂಗಳೂರಿಗೆ ತೆರಳಿದೆ. ಗ್ರಾಮದಾದ್ಯಂತ ಪೊಲೀಸರು ಗಸ್ತು ತಿರುಗುತ್ತಿದ್ದು, ಊರಿನ ತುಂಬಾ ಜೀಪಿನ ಸದ್ದು ಕೇಳಿ ಬರುತ್ತಿದೆ.

ಆಸ್ತಿ ವಿಷಯಕ್ಕೆ ಹತ್ಯೆ..?

ಆಸ್ತಿಯ ವಿಚಾರದಲ್ಲಿ ಕಲಹ ಮಾಡಿಕೊಂಡು ತನ್ನ ತಂದೆ, ತಾಯಿ, ಸಹೋದರ ಹಾಗೂ ಅವರ ಪತ್ನಿಯನ್ನು ಹರಿತವಾದ ಆಯುಧದಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಮೃತ ಶಂಭು ಭಟ್ ಪುತ್ರಿ ಜಯಾ ಪ್ರಕಾಶ ಅಡಿಗ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಂಭು ಭಟ್ (65), ಪತ್ನಿ ಮಾದೇವಿ ಭಟ್ ( 58), ಮಗ ರಾಘವೇಂದ್ರ ಭಟ್ (40) ಹಾಗೂ ಪತ್ನಿ ಕುಸುಮಾ ಭಟ್ (32) ಅವರನ್ನು ಕೊಲೆ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಶಿಕ್ಷೇ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಮೃತರ ಪುತ್ರಿ ಜಯಾ ಅಡಿಗ ನೀಡಿರುವ ದೂರಿನ ಹಿನ್ನೆಲೆ ಕೊಲೆಗೆ ಕುಮ್ಮಕ್ಕು ನೀಡಿರುವ ಹಿನ್ನಲೆಯಲ್ಲಿ ಸದ್ಯಕ್ಕೆ ಸೊಸೆ ವಿದ್ಯಾ ಭಟ್ ಅವರ ತಂದೆ ಶ್ರೀಧರ ಭಟ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ ಸಹೋದರ ವಿನಯ ಭಟ್‌ಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಮೃತ ಶಂಭು ಭಟ್ಟರ ಹಿರಿಯ ಮಗ ಶ್ರೀಧರ ಭಟ್ ಕಳೆದ ಸೆಪ್ಟೆಂಬರ್‌ನಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಗಂಡ ಸತ್ತು 14 ದಿನಕ್ಕೆ ಗಂಡನ ಮನೆಯಲ್ಲಿ ಜೀವನಾಂಶ ವಿಚಾರಕ್ಕೆ ಸೊಸೆ ವಿದ್ಯಾ ಭಟ್ ಗಲಾಟೆ ನಡೆಸುತ್ತಿದ್ದರು. ಆಕೆಯ ತಂದೆ ಶ್ರೀಧರ ಭಟ್ ಹಾಗೂ ಸಹೋದರ ವಿನಯ್ ಭಟ್ ಶಂಭು ಭಟ್ಟರ ಮನೆಗೆ ಬಂದು ಆಸ್ತಿ ಪಾಲು ಪಾಲು ಕೇಳುತ್ತಿದ್ದರು. ಪುತ್ರನ ತಿಂಗಳ ಕಾರ್ಯ, ವರ್ಷದ ಕಾರ್ಯದ ಬಳಿಕ ಪಾಲು ನೀಡುತ್ತೇನೆಂದು ಹೇಳಿದರೂ ಕೇಳದ ಸೊಸೆ ಕಲಹ ಮುಂದುರೆಸಿದ್ದಳು. ಕಿರಿಕಿರಿಯಿಂದ ಬೇಸತ್ತು ಶಂಭು ಭಟ್ ತನ್ನಲ್ಲಿದ್ದ 5 ಮುಕ್ಕಾಲು ಎಕರೆಯಲ್ಲಿ ಸೊಸೆ ವಿದ್ಯಾ ಭಟ್‌ಗೆ 1ಎಕರೆ 15 ಗುಂಟೆ ಜಾಗ ನೀಡಿದ್ದರು. ಅಲ್ಲದೇ, ತನ್ನ ಹೆಣ್ಣು ಮಕ್ಕಳಿಗೂ ಸಮಾನಾಗಿ ಆಸ್ತಿ ಹಂಚಿದ್ದು ನೀಡಿದ್ದ ಜಾಗಕ್ಕೆ ಡಾಕ್ಯುಮೆಂಟ್ ಆಗಲು ಮಾತ್ರ ಬಾಕಿಯಿತ್ತು

ಆಸ್ತಿ ಹಂಚಿಕೆ ಸರಿಯಾಗಿ ಆಗಿಲ್ಲ ಎಂದು ವಿದ್ಯಾ ಭಟ್‌ ತಕರಾರು ಮಾಡುತ್ತಿದ್ದರು. ಶಂಭು ಭಟ್ ತನ್ನ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡುವ ಬದಲು ಗಂಡು ಮಕ್ಕಳಿಗೆ ಮಾತ್ರ 3-3 ಎಕರೆ ನೀಡಬೇಕಿತ್ತು ಎಂಬುದು ವಿದ್ಯಾ ವಾದವಾಗಿತ್ತು. ಈ ಹಿಂದೆಯೂ ಇದೇ ವಿಚಾರದಲ್ಲಿ ಗಲಾಟೆಯಾಗಿ ಶಂಭು ಭಟ್ ಕುಟುಂಬಕ್ಕೆ ವಿನಯ ಭಟ್ ಕೊಲೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಶುಕ್ರವಾರ ಸುಮಾರು 3.30 ರಿಂದ 4 ಗಂಟೆಯ ಹೊತ್ತಿಗೆ ಸೊಸೆಯ ಪಾಲಿಗೆ ನೀಡಿದ್ದ ಜಾಗದಲ್ಲಿ ವೀಳ್ಯದೆಲೆ ತೆಗೆಯಿಸುತ್ತಿದ್ದ ಆಕೆಯ ಸಹೋದರ ವಿನಯ್ ಭಟ್ ಮತ್ತು ಶಂಭು ಭಟ್ ನಡುವೆ ಜಗಳವಾಗಿತ್ತು. ಕತ್ತಿ ಹಾಗೂ ಚಾಕು ಸಮೇತವಾಗಿ ಬಂದಿದ್ದ ಆರೋಪಿಗಳು ಶಂಭು ಭಟ್ ಮನೆಯೊಳಗೆ ನುಗ್ಗಿ ಗಲಾಟೆ ಮಾಡಲಾರಂಭಿಸಿದ್ದರು. ಗಲಾಟೆ ವಿಕೋಪಕ್ಕೆ ತೆರಳಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಬಟ್ಟೆ ಸುಟ್ಟ ಆರೋಪಿಗಳು:
ಕೊಲೆ ಮಾಡಿದ ನಂತರ ತಮ್ಮ ಬಟ್ಟೆಗಳನ್ನು ಸುಟ್ಟು ಹಾಕಿ ಆರೋಪಿಗಳು ಪರಾರಿಯಾಗಿದ್ದಾರೆ. ಶಿವಮೊಗ್ಗ ಅಥವಾ ಗೋವಾದಲ್ಲಿ ತಲೆ ಮರೆಸಿಕೊಂಡಿರುವುದಾಗಿ ಮಾಹಿತಿ ಲಭಿಸಿದ್ದು ಆರೋಪಿಗಳಿಗಾಗಿ ಭಟ್ಕಳ ಪೊಲೀಸರ ತಂಡ ಬಲೆ ಬೀಸಿದೆ. ಭಟ್ಕಳ ಡಿವೈಎಸ್‌ಪಿ ಮತ್ತು ಸಿಪಿಐ ನೇತೃತ್ವದಲ್ಲಿ ಮೂರು ತಂಡ ರಚಿಸಿ ತನಿಖೆ ಆರಂಭಿಸಿದೆ.