ತೀರ್ಥಹಳ್ಳಿ: ಲೇಖಕನ ಆಂತರ್ಯದಲ್ಲಿ ಹುಟ್ಟಿದ ಭಾವನೆ ಕೃತಿಯ ರೂಪದಲ್ಲಿ ಮೂಡಿಸುವುದು ಸುಲಭ ಸಾಧ್ಯವಲ್ಲ. ಅಂತಹ ಕೌಶಲವೇ ಬರಹಗಾರರಿಗೆ ಅರ್ಹತೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಸಣ್ಣರಾಮ ಹೇಳಿದರು.
ಪಟ್ಟಣದ ಗೋಪಾಲ ಗೌಡ ರಂಗಮಂದಿರದಲ್ಲಿ ಲೇಖಕಿ ಎಂ.ಜಿ.ಗಾಯತ್ರಿ ಶೇಷಗಿರಿ ಬರೆದ ‘ಜೋಪಾನ ಸಖಿ ಜೋಪಾನ’ ಕೃತಿಯನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸ್ತನ ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದ ಈ ಕೃತಿಯ ಶೀರ್ಷಿಕೆಯೇ ತಾಯಿ ಕರುಳಿನ ಸಂವಾದದಂತಿದೆ ಎಂದರು.
ಹೆಣ್ಣಿನ ನೋವನ್ನು ಅರಿತ ಲೇಖಕಿ ತನಗೇ ನೋವು ತಟ್ಟಿದ ರೀತಿಯಲ್ಲಿ ಸಾಂತ್ವನದ ಭಾವದಲ್ಲಿ ದಾಖಲಿಸಿದ್ದಾರೆ. ಸ್ತನ ಕ್ಯಾನ್ಸರ್ ರೋಗಕ್ಕೆ ತುತ್ತಾದವರಲ್ಲಿ ಸಕಾರಾತ್ಮಕ ಚಿಂತನೆಯೊಂದಿಗೆ ಆವರಲ್ಲಿ ಆತ್ಮವಿಶ್ವಾಸ ತುಂಬಿ ಅವರನ್ನು ಪ್ರೀತಿಯಿಂದ ಕಾಣುವುದು ಮುಖ್ಯ ಎಂದು ಹೇಳಿದರು.
ಮೊಬೈಲ್ ಗೀಳಿನ ಈ ಕಾಲಘಟ್ಟದಲ್ಲಿ ಸಾಹಿತ್ಯ ಕೃತಿಗಳ ರಚನೆ ಅಗತ್ಯವೇ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಓದುವ ಹವ್ಯಾಸವೇ ಕಳೆದುಹೋಗುತ್ತಿದೆ. ಹೀಗಾಗಿ ಯಾರಿಗಾಗಿ ಬರೆಯಬೇಕು ಎಂಬ ಮನೋಭಾವ ಬರಹಗಾರರಲ್ಲಿ ನಿರ್ಮಾಣವಾಗಿದೆ. ಆದರೆ ಎರಡು ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಈ ನೆಲದಲ್ಲಿ ಸಾಹಿತ್ಯದ ಬಗೆಗಿನ ಕಾಳಜಿ ಪ್ರಶಂಸನೀಯ ಎಂದರು.
ಪುಸ್ತಕದ ಕುರಿತು ಮಾತನಾಡಿದ ಲೇಖಕಿ ಎಂ.ಜಿ.ಗಾಯತ್ರಿ ಶೇಷಗಿರಿ, ಸ್ತನ ಕ್ಯಾನ್ಸರ್ ರೋಗಕ್ಕೆ ತುತ್ತಾದ ಮಹಿಳೆಯನ್ನು ಹತ್ತಿರದಿಂದ ಕಂಡಿದ್ದು ವೈಯಕ್ತಿಕವಾಗಿಯೂ ನನ್ನನ್ನು ಕಾಡಿದ ಹಿನ್ನೆಲೆಯಲ್ಲಿ ಈ ಕೃತಿಯ ರಚನೆಗೆ ಪ್ರೇರಣೆ ದೊರೆತಿದೆ. ರೋಗ ಕಾಣಿಸಿಕೊಂಡ ಮಾತ್ರಕ್ಕೆ ಮಹಿಳೆಯರು ಆತಂಕಪಡುವ ಅಗತ್ಯವಿಲ್ಲ. ಈ ಬಗ್ಗೆ ಮಹಿಳೆಯರನ್ನು ಜಾಗೃತಗೊಳಿಸಬೇಕು ಎಂಬುದು ನನ್ನ ಪ್ರಯತ್ನ ಎಂದರು.
ನಿವೃತ್ತ ಪ್ರಾಚಾರ್ಯ ಡಾ. ಬಿ.ಗಣಪತಿ, ಡಾ. ಅಪರ್ಣಾ ಸುವರ್ಣ, ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಇದ್ದರು.