ಬಾಗಲಕೋಟೆ: ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಗುರುವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಂಘಟನೆ ಕಾರ್ಯಕರ್ತರು, ಪದಾಧಿಕಾರಿಗಳು ಜಿಲ್ಲಾಧಡಳಿತ ಮೂಲಕ ಸಿಎಂ ಸಿದ್ದರಾಮಯ್ಯ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ಪ್ರಸಕ್ತ ವರ್ಷ ಮುಂಗಾರು ಮಳೆ ಕೈಕೊಟ್ಟ ಹಿನ್ನಲೆಯಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಬಿತ್ತನೆ ಮಾಡಿದ ಬೀಜಗಳು ಮೊಳಕೆ ಬಂದಿಲ್ಲ. ನದಿಗಳಲ್ಲಿ ನೀರು ಇಲ್ಲದೇ ನೀರಾವರಿ ಪ್ರದೇಶದ ಬೆಳೆಗಳು ಕೂಡಾ ಒಣಗುತ್ತಿವೆ. ಪ್ರಮುಖ ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ವಿಜಯಪುರ, ಕೊಪ್ಪಳ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳನ್ನು ಬರಪೀಡಿತ ಪ್ರದೇಶಗಳು ಅಂತ ಘೋಷಣೆ ಮಾಡಬೇಕು. ತಕ್ಷಣಕ್ಕೆ ಇನ್‌ಪುಟ್ ಸಬ್ಸಿಡಿ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಹಣ ಪಾವತಿಸಬೇಕು. ಜೊತೆಗೆ ರಂಗರಾಜನ್ ವರದಿ ಪ್ರಕಾರ ಉಪಉತ್ಪನ್ನಗಳಲ್ಲಿ ಲಾಭಾಂಶ ನೀಡಬೇಕು. ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳದಿಂದ ಹಿನ್ನೀರಿನಿಂದ ಮುಳುಗಡೆಯಾಗುವ ನೀರಾವರಿ ಜಮೀನಿಗೆ ಪ್ರತಿ ಎಕರೆಗೆ ೬೦ ಲಕ್ಷ ರು. ಹಾಗೂ ಒಣಬೇಸಾಯ ಜಮೀನಿಗೆ ೫೦ ಲಕ್ಷ ರು. ಪರಿಹಾರ ನೀಡಬೇಕು. ಜೊತೆಗೆ ಪುನರ್ವಸತಿ ಕೇಂದ್ರಗಳಿಗೆ ಎಲ್ಲ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಕರ್ನಾಟಕ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ವಿಮೆ ತುಂಬಿದ ರೈತರಿಗೆ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಬೆಳೆಗಳಿಗೆ ವಿಮಾ ಕಂಪನಿಗಳಿಂದ ಸರಿಯಾಗಿ ಪರಿಹಾರ ಬಂದಿಲ್ಲ. ಈ ಬಗ್ಗೆ ತನಿಖೆ ಕೈಗೊಂಡು ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.
ರೈತರು ಹಾಗೂ ಸಾಮಾನ್ಯರು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿದ್ದಾಗ ತುರ್ತು ಶಸ್ತ್ರಚಿಕಿತ್ಸೆ ಅವಶ್ಯವಿದ್ದಾಗ ಆಸ್ಪತ್ರೆಗಲ್ಲಿ ರೋಗಿಗಳಿಂದ ಹಣ ತುಂಬಿಸಿಕೊಳ್ಳಲಾಗುತ್ತಿದೆ. ಆಯುಷ್ಮಾನ್ ಭಾರತ - ಆರೋಗ್ಯ ಕರ್ನಾಟಕ ಯೋಜನೆ ಉಪಯೋಗವಿಲ್ಲದಂತಾಗಿದ್ದು, ಬಡ ರೋಗಿಗಳ ಚಿಕಿತ್ಸೆಗೆ ಸರ್ಕಾರವೇ ಹಣ ಒದಗಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ, ಉ.ಪ್ರಾ ಉಪಾಧ್ಯಕ್ಷ ವಿ.ಜಿ.ರೇವಡಿಗಾರ, ಮುಖಂಡರಾದ ಸುಬ್ಬರಾಯಗೌಡ ಪಾಟೀಲ, ಕಾವ್ಯಾ ಪಾಟೀಲ, ಬಸವರಾಜ ಬೆಣ್ಣೂರ, ಬಸವಂತಪ್ಪ ಸಂಕಾನಟ್ಟಿ ಇತರರಿದ್ದರು.