ಮುದ್ದೇಬಿಹಾಳದಲ್ಲಿ ಬಿಜೆಪಿ ಮಂಡಲದ ಪದಾಧಿಕಾರಿಗಳು ಶುಕ್ರವಾರ ಶಿರಸ್ತೇದಾರ ಎಂ.ಎಸ್. ಬಾಗೇವಾಡಿ ಅವರಿಗೆ ಮನವಿ ಸಲ್ಲಿಸಿದರು. ಜಗದೀಶ ಪಂಪಣ್ಣವರ, ಸಿದ್ದರಾಜ ಹೊಳಿ, ಶಂಕರಗೌಡ ಶಿವಣಗಿ, ರವೀಂದ್ರ ಬಿರಾದಾರ, ಸಂಜೀವ ಬಾಗೇವಾಡಿ, ಮಂಜುನಾಥ ಚಲವಾದಿ ಇತರರಿದ್ದರು. 
ಜಿಲ್ಲೆ

ಬರಪೀಡಿತ ಪ್ರದೇಶಕ್ಕೆ ನೆರವಾಗಲು ಆಗ್ರಹ

ಮುದ್ದೇಬಿಹಾಳ: ಮಳೆಯ ಅಭಾವದಿಂದ ಉಂಟಾಗಿರುವ ಬರಗಾಲದ ಸಮಸ್ಯೆ, ವಿದ್ಯುತ್ ಅಭಾವದಿಂದ ರೈತರ ಪಂಪಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸದೇ ಇರುವುದರಿಂದ ರೈತರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದು ಕೂಡಲೇ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಬಿಜೆಪಿ ಮಂಡಲ ಪದಾಧಿಕಾರಿಗಳು ಆಗ್ರಹಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಹಾಗೂ ಮಂಡಲದ ಪದಾಧಿಕಾರಿಗಳು ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ರ‌್ಯಾಲಿ ಪಟ್ಟಣದ ಆಡಳಿತ ಕಚೇರಿಗೆ ಆಗಮಿಸಿತು. ಬಳಿಕ ಶಿರಸ್ತೇದಾರ ಎಂ.ಎಸ್. ಬಾಗೇವಾಡಿ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಮಾತನಾಡಿ, ಮಳೆಯ ಅಭಾವದಿಂದ ಬರಗಾಲದ ಸಮಸ್ಯೆ ಉಂಟಾಗಿದೆ. ವಿದ್ಯುತ್ ಅಭಾವದಿಂದ ರೈತರ ಪಂಪಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ನಿರಂತರ 7ಗಂಟೆಗಳ ಕಾಲ ವಿದ್ಯುತ ಪೂರೈಕೆ ಮಾಡದೇ ಅನಿಯಮಿತ ಲೋಡ್ ಶೆಡ್ಡಿಂಗ್‌ದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ. ರೈತರು ಈಗಾಗಲೇ ಶೇ. 80ರಷ್ಟು ಬೆಳೆಗಳನ್ನು ಬಿತ್ತನೆ ಮಾಡಿದ್ದು, ಅವುಗಳನ್ನು ರಕ್ಷಿಸಿಕೊಳ್ಳಲು ವಿದ್ಯುತ್ ಸಮಸ್ಯೆ ಉಂಟಾಗಿ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ, ಭೂಸಿರಿ, ಶ್ರಮ ಶಕ್ತಿ, ರೈತ ಸಂಪದ ಯೋಜನೆಗಳನ್ನು ರದ್ದು ಮಾಡುವ ಮೂಲಕ ಕೃಷಿ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಸುಮಾರು 42 ರೈತರ ಆತ್ಮಹತ್ಯೆ ಪ್ರಕರಣಗಳ ವರದಿಯಾಗಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ ಎಂದರು.

ಕೂಡಲೇ ಸಿಎಂ ಸಿದ್ದರಾಮಯ್ಯ ಸರ್ಕಾರ ಈ ಬಗ್ಗೆ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಂಡು ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಪಕ್ಷದ ಮುಖಂಡರಾದ ಸಿದ್ದರಾಜ ಹೊಳಿ, ಶಂಕರಗೌಡ ಶಿವಣಗಿ, ರವೀಂದ್ರ ಬಿರಾದಾರ, ಸಂಜೀವ ಬಾಗೇವಾಡಿ, ಮಂಜುನಾಥ ಚಲವಾದಿ, ಲಕ್ಷ್ಮಣ ಬಿಜ್ಜೂರ, ಅಲ್ತಾಫ ಬಾಗವಾನ, ಪರಶುರಾಮ ನಾಲತವಾಡ, ಸುಭಾಷ ಕಟ್ಟೀಮನಿ, ಬೀಳಿನಸಿದ್ದ ಒಡೆಯರ, ಶ್ರೀಶೈಲ ದೊಡಮನಿ, ಮಹಾಂತಗೌಡ ಕಾಶಿನಕುಂಟಿ, ಗೌರಮ್ಮ ಹುನಗುಂದ, ಸಂತೋಷ ಬಾದರಬಂಡಿ, ಕೃಷ್ಣಾ ಚವ್ಹಾಣ, ರಾಯಣ್ಣ ನಾಶಿ, ಅರ್ಜುನ ಕುರಿ, ನಾಗರಾಜ ಕಮತರ ಇತರರಿದ್ದರು.