ಅರಸೀಕೆರೆ: ಅರಸೀಕೆರೆ ತಾಲೂಕನ್ನು ಸರ್ಕಾರ ತಕ್ಷಣವೇ ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಒತ್ತಾಯಿಸಿದರು.
ಮಳೆ ಕೊರತೆಯಿಂದ ಈಗಾಗಲೇ ವಿವಿಧ ಬೆಳೆಗಳು ನೆಲಕಚ್ಚಿದ್ದು, ಸಾಲ, ಸೋಲ ಮಾಡಿರುವ ರೈತನಿಗೆ ಸಂಕಷ್ಟ ಎದುರಾಗಿದೆ. ಪರಿಸ್ಥಿತಿ ಹೀಗಿದ್ದರೂ ಜಿಲ್ಲೆಯ ಅನ್ಯ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ ಅರಸೀಕೆರೆ ತಾಲೂಕನ್ನು ಕೈಬಿಟ್ಟಿರುವುದು ಸರಿಯಲ್ಲ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವರ ಜತೆ ಮಾತನಾಡಿ ಲೋಪ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಗೃಹಲಕ್ಷ್ಮೀ ಫಲಾನುಭವಿಗಳನ್ನು ಆ.30ರಂದು ಬುಧವಾರ ಮೈಸೂರಿಗೆ ಕರೆದೊಯ್ಯಲು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ 40 ಬಸ್ಸುಗಳನ್ನು ಬಳಕೆ ಮಾಡಲಾಗುತ್ತಿದೆ. ನನ್ನ ಕ್ಷೇತ್ರದಲ್ಲಿ ಈಗಾಗಲೇ ಶೇ.90 ರಷ್ಟು ಫಲಾನುಭವಿಗಳು ಹೆಸರು ನೋಂದಣಿ ಮಾಡಿಸಿದ್ದು ಇನ್ನುಳಿದವರಿಗೂ ಸವಲತ್ತು ತಲುಪಿಸಲಾಗುವುದು ಎಂದರು. ಮುಖಂಡರಾದ ಜೆ.ಪಿ.ಜಯಣ್ಣ, ರಾಂಪುರ ಸುರೇಶ್, ಜಯಣ್ಣ, ಬಿಲ್ಡಿಂಗ್ ಗುತ್ತಿಗೆದಾರ ಹರೀಶ್ ಇತರರು ಹಾಜರಿದ್ದರು.