ಜಿಲ್ಲೆ

ಬರಪೀಡಿತ ಜಿಲ್ಲೆ ಘೋಷಣೆಗೆ ಒತ್ತಾಯ  -ರೈತ ಸಂಘದ ಪ್ರತಿಭಟನೆ

ಡಿ. ಎಂ. ಮಹೇಶ್

ದಾವಣಗೆರೆ: ದಾವಣಗೆರೆ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ತಹಸೀಲ್ದಾರ್ ಕಚೇರಿ ಸಮೀಪದ ರಾಜ್ಯ ರೈತ ಸಂಘದ ಜಿಲ್ಲಾ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಬುಳ್ಳಾಪುರದ ಹನುಮಂತಪ್ಪ ಮಾತನಾಡಿ ಹಿಂದಿನ ವರ್ಷ ಅತಿವೃಷ್ಟಿಯಿಂದಲೂ ರೈತರು ತೊಂದರೆ ಅನುಭವಿಸಿದ್ದರು. ಈ ವರ್ಷ ಅನಾವೃಷ್ಟಿಯಿಂದಾಗಿ ಬೆಳೆಗಳು ಒಣಗುತ್ತಿವೆ. ಮೆಕ್ಕೆಜೋಳ ಹಾಗೂ ಬೆಳೆಹಾನಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಹಾರ ನೀಡಬೇಕು. ಪ್ರತಿ ಎಕರೆ ಮೆಕ್ಕೆಜೋಳ ಹಾನಿಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಮೆಕ್ಕೆಜೋಳ ಮತ್ತು ಇತರೆ ಬೆಳೆಗಳು ಬಹುತೇಕ ಮಳೆ ಬಾರದೆ ಒಣಗುತ್ತಿವೆ. ರೈತರು ಕೃಷಿ ಮಾಡಲು ದುಬಾರಿ ಬಿತ್ತನೆ ಬೀಜ ರಸಗೊಬ್ಬರ, ಕೂಲಿ ಇತರೆ ವೆಚ್ಚಗಳಿಗೆ ಹಣ ಖರ್ಚು ಮಾಡಿ ಕಷ್ಟದಲ್ಲಿದ್ದಾರೆ ಎಂದು ಹೇಳಿದರು.

ವಿದ್ಯುತ್ ವ್ಯತ್ಯಯದಿಂದಲೂ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ಅಧಿಕಾರಿಗಳು ಮನಬಂದಂತೆ ವರ್ತಿಸುತ್ತಿದ್ದಾರೆ. ಸತತ 8 ತಾಸು ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು.

ಬೆಳೆ ವಿಫಲವಾಗಿದ್ದರಿಂದ ರೈತರು ಬ್ಯಾಂಕುಗಳಲ್ಲಿ ಪಡೆದ ಸಾಲ ತೀರಿಸಲು ಸಾಧ್ಯವಾಗಿಲ್ಲ. ಬ್ಯಾಂಕ್‌ಗಳು ಕೂಡ ನಿರಂತರ ನೋಟಿಸ್ ಕಳಿಸುತ್ತಿವೆ. ಆದ್ದರಿಂದ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ಕೊಗ್ಗನೂರು ಹನುಮಂತಪ್ಪ, ಎಸ್.ಟಿ.ಪರಮೇಶ್ವರಪ್ಪ, ಇ.ಶ್ರೀನಿವಾಸ್, ಕರಿಲಕ್ಕೇನಹಳ್ಳಿ ರೇವಣಸಿದ್ದಪ್ಪ, ಬಲ್ಲೂರು ನಾಗರಾಜ್ ರೆಡ್ಡಿ, ಈಚಘಟ್ಟ ವಿಜಯಕುಮಾರ್, ಚಟ್ಟೋಬನಹಳ್ಳಿ ಕಂಪಳೇಶ್, ಬುಳ್ಳಾಪುರ ಕುಮಾರ್, ಮಾಳಿಗೇರ ತಿಪ್ಪಣ್ಣ, ಬುಳ್ಳಾಪುರದ ಶರಣಪ್ಪ ಇತರರಿದ್ದರು.

---