ಜಿಲ್ಲೆ

ಬರಗೇರಮ್ಮ ಕೆಂಡೋತ್ಸವಕ್ಕೆ ಸಾಕ್ಷಿಯಾದ ಭಕ್ತರು

ಚಿತ್ರದುರ್ಗ: ನಗರದೇವತೆ ಬರಗೇರಮ್ಮ ದೇಗುಲದಲ್ಲಿ ದೇವಿಯ ಕೆಂಡೋತ್ಸವ ಭಾನುವಾರ ರಾತ್ರಿ ಶಾಸ್ತ್ರೋಕ್ತವಾಗಿ ನೆರವೇರುವ ಮೂಲಕ ಸುಸಂಪನ್ನಗೊಂಡಿತು. ಇದಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ನವದುರ್ಗೆಯರಲ್ಲಿ ಬರಗೇರಮ್ಮ ಪ್ರಮುಖ ಶಕ್ತಿದೇವತೆಯಾಗಿದ್ದು, ನವರಾತ್ರಿ ಮಹೋತ್ಸವದಲ್ಲಿ ಒಂಬತ್ತು ದಿನವೂ ದೇವಿಯ ಆರಾಧನೆಯೊಂದಿಗೆ ವಿಶೇಷ ಪೂಜೆಗಳು ಜರುಗಿದವು. ಪ್ರತಿ ವರ್ಷ ವಿಜಯದಶಮಿ ಹಬ್ಬವಾದ ಮರುದಿನ ಕೆಂಡೋತ್ಸವ ನಡೆಯುವುದು ಪ್ರತೀತಿ ಇದ್ದು, ಅದರಂತೆ ಈ ಬಾರಿಯೂ ಕಳೆಗಟ್ಟುವ ಮೂಲಕ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಸೆಳೆಯುವಲ್ಲಿ ಸಫಲವಾಯಿತು.

ಬುಡಕಟ್ಟು ಸಂಸ್ಕೃತಿಯ ವಿಧಾನದಂತೆ ಪೂಜಾ ಕೈಂಕರ್ಯ ಮುಂಜಾನೆಯಿಂದಲೇ ನೆರವೇರಿದವು. ಕೆಂಡೋತ್ಸವಕ್ಕೆ ಶನಿವಾರ ರಾತ್ರಿಯಿಂದಲೇ ಸಿದ್ಧತೆ ನಡೆಯಿತು.

ಕೆಂಡೋತ್ಸವದ ಅಂಗವಾಗಿ ದೇವಿಯ ಉತ್ಸವಮೂರ್ತಿಯೊಂದಿಗೆ ಪಲ್ಲಕ್ಕಿಯನ್ನೂ ಕನಕಾಂಬರ, ಮಲ್ಲಿಗೆ ಸೇರಿ ವಿವಿಧ ವರ್ಣದ ಪುಷ್ಪಗಳಿಂದ, ಹೂವಿನಾರಗಳಿಂದ ವೈಭವೋಪೇತವಾಗಿ ಅಲಂಕರಿಸಲಾಗಿತ್ತು.

ಐತಿಹಾಸಿಕ ಸಿಹಿನೀರು ಹೊಂಡದಲ್ಲಿ ಗಂಗಾಪೂಜೆ ನೆರವೇರಿದ ಬಳಿಕ ದೇಗುಲದ ಅರ್ಚಕರಾದ ಮಂಜು, ರವಿ, ಶಿವು ಕೆಂಡ ತುಳಿಯುವ ಮೂಲಕ ದೇವಿಗೆ ಕೆಂಡಾರ್ಚನೆ ಪೂಜೆಯನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಿದರು. ಈ ವೇಳೆ ಭಕ್ತರಿಂದ ಉಧೋ ಉಧೋ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ನಂತರ ಮಹಾಮಂಗಳಾರತಿ ಸ್ವೀಕರಿಸಿದರು.

ದೇವಿಯ ಉತ್ಸವಮೂರ್ತಿಯ ಪಲ್ಲಕ್ಕಿ ಮೆರವಣಿಗೆಯೂ ಬುರುಜನಹಟ್ಟಿಯ ಬರಗೇರಮ್ಮ ದೇವಿಯ ಪಾದದ ಗುಡಿಯಿಂದ ಆರಂಭವಾಗಿ ಸಂಗೊಳ್ಳಿರಾಯಣ್ಣ ವೃತ್ತ, ಗೌರಸಂದ್ರ ಮಾರಮ್ಮ ದೇವಿ, ರೇಣುಕಾ ಯಲ್ಲಮ್ಮ ದೇವಿ ದೇಗುಲ, ಹೊಳಲ್ಕೆರೆ ರಸ್ತೆ ಮಾರ್ಗವಾಗಿ ದೇಗುಲದವರೆಗೂ ನೂರಾರು ಭಕ್ತರ ಜಯಘೋಷ, ಮಂಗಳ ವಾದ್ಯಗಳೊಂದಿಗೆ ಸಾಗಿತು. ಕೆಂಡೋತ್ಸವ ಮುಗಿದ ಬಳಿಕ ಪಾದದ ಗುಡಿಯಲ್ಲಿ ಗುಡಿತುಂಬುವ ಕಾರ್ಯಕ್ರಮ ನಡೆಯಿತು.

ದೇಗುಲದ ಗರ್ಭಗುಡಿ, ಪಾದಗುಡಿಯ ದೇವಿ ಮೂರ್ತಿಗಳಿಗೂ ಪುಷ್ಪಾಲಂಕಾರ ಸೇವೆ ನೆರವೇರಿತು. ಮುಂಭಾಗದ ಬನ್ನಿ ಮಹಾಕಾಳಮ್ಮ ದೇವಿಗೆ ವಿಶೇಷ ಪೂಜೆ ಜರುಗಿತು. ಒಟ್ಟಾರೆ ಇಡೀ ದೇಗುಲದ ಆವರಣ ವಿಶೇಷಾಲಂಕಾರದೊಂದಿಗೆ ಕಂಗೊಳಿಸಿತು.