ಕಲಬುರಗಿ: ಕಳೆದ ಮುಂಗಾರಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ಸರ್ಕಾರ ಜಿಲ್ಲೆಯ ಎಲ್ಲ ೧೧ ತಾಲೂಕು ಬರಪೀಡಿತ ಘೋಷಿಸಿರುವ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ೨,೬೩,೩೯೩ ರೈತರಿಗೆ ೨೭೪.೫೧ ಕೋಟಿ ರೂ. ಇನ್ಪುಟ್ ಸಬ್ಸಿಡಿ ಬೆಳೆ ಪರಿಹಾರ ನೀಡಲು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅನುಮೋದನೆ ನೀಡಿದ್ದಾರೆ.
ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿ ಆಧರಿಸಿ ಫ್ರೂಟ್ಸ್ ಐಡಿ ಹೊಂದಿರುವ ಮತ್ತು ಪಹಣಿ ಜೋಡಣೆಯಾಗಿರುವ ೨,೮೨,೦೧೦ ರೈತರಿಗೆ ಈಗಾಗಲೇ ಡಿಬಿಟಿ ಮೂಲಕ ಮೊದಲ ಕಂತಾಗಿ ಗರಿಷ್ಠ ೨೦೦೦ ರೂ.ನಂತೆ ೫೬.೦೨ ಕೋಟಿ ರೂ. ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಇಂದಿನ ಅನುಮೋದನೆ ಸೇರಿ ಒಟ್ಟಾರೆ ಎರಡು ಹಂತದಲ್ಲಿ ಈವರೆಗೆ ಜಿಲ್ಲೆಯ ೨,೮೨,೦೧೦ ರೈತರಿಗೆ ೩೩೦.೫೩ ಕೋಟಿ ರೂ. ಖಾತೆಗೆ ಜಮೆ ಮಾಡಿದಂತಾಗಲಿದೆ ಎಂದು ತಿಳಿಸಿದ್ದಾರೆ.
ಬೆಳೆ ಹಾನಿ ಪರಿಹಾರ ಪಡೆಯಲು ಫ್ರೂಟ್ಸ್ಗೆ ಪಹಣಿ ಜೋಡಣೆ ಕಡ್ಡಾಯವಾಗಿದ್ದರಿಂದ ಈವರೆಗೆ ನೋಂದಣಿ ಮಾಡದ ರೈತರು ತಮ್ಮ ಆಧಾರ್, ಪಹಣಿ ಹಾಗೂ ಬ್ಯಾಂಕ್ ಪಾಸ್ ಬುಕ್ ದಾಖಲೆಗಳೊಂದಿಗೆ ಹತ್ತಿರದ ಕಂದಾಯ, ಕೃಷಿ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಬೆಳೆ ಪರಿಹಾರಕ್ಕೆ ಅರ್ಹರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.