ಜಿಲ್ಲೆ

ಬರ ಪ್ರದೇಶದಲ್ಲಿ ಬೆಳೆ ಭರಪೂರ

ಮುಂಡರಗಿ: ಬರಪೀಡಿತ ಪ್ರದೇಶದ ರೈತರೊಬ್ಬರು ಯಾವುದೇ ನೀರಾವರಿ ಸೌಲಭ್ಯವಿಲ್ಲದೆ ತೋಟಗಾರಿಕೆ ಮತ್ತು ಅರಣ್ಯ ಕೃಷಿ ಮಾಡಿ ವಿನೂತನ ಸಾಧನೆ ಮಾಡಿದ್ದಾರೆ. ತಾಲೂಕಿನ ಬೂದಿಹಾಳ ಗ್ರಾಮದ ರೈತ ಗುಡದಪ್ಪ ಲಿಂಗಶೆಟ್ಟರ್ ಅವರು ತಮ್ಮ 3.13 ಎಕರೆ ಪ್ರದೇಶದಲ್ಲಿ ಕೃಷಿ ಹೊಂಡ ನಿರ್ವಿುಸಿಕೊಂಡು ಉತ್ತಮ ಬೆಳೆ ಬೆಳೆದಿದ್ದಾರೆ.

ಬೈಫ್ ಸಂಸ್ಥೆಯ ಸಹಕಾರದಿಂದ ಗುಡದಪ್ಪ ತಮ್ಮ ಜಮೀನಿನಲ್ಲಿ 30 ಅಡಿ ಅಗಲ, 10 ಅಡಿ ಆಳದ ಕೃಷಿ ಹೊಂಡ ನಿರ್ವಿುಸಿದ್ದಾರೆ. ಸಂಗ್ರಹವಾಗುವ ಮಳೆ ನೀರನ್ನು ಗಿಡಗಳಿಗೆ ಹಾಕಿದ್ದಾರೆ. ಪ್ರತಿಯೊಂದು ಗಿಡದ ಬುಡಕ್ಕೆ ಮಣ್ಣಿನ ಮಡಿಕೆ, ಪ್ಲಾಸ್ಟಿಕ್ ಡಬ್ಬಿಗಳನ್ನು ಅಳವಡಿಸಿ, ರಂಧ್ರ ಮಾಡಿದ್ದಾರೆ. ಈ ಮಡಿಕೆಗಳಿಗೆ ಹಾಕುವ ನೀರು ಹನಿಹನಿಯಾಗಿ ಗಿಡಕ್ಕೆ ಪೂರೈಕೆಯಾಗುತ್ತದೆ. ಹೊಂಡದಲ್ಲಿ ನೀರು ಇಲ್ಲದಿದ್ದಾಗ ಟ್ಯಾಂಕರ್ ಮೂಲಕ ಗಿಡಗಳಿಗೆ ನೀರು ಹಾಕುತ್ತಿದ್ದರು. ಗಿಡಗಳ ಸುತ್ತ ತೇವಾಂಶ ಹೆಚ್ಚಿರಬೇಕೆನ್ನುವ ಉದ್ದೇಶಕ್ಕಾಗಿ ಜಮೀನಿನ ಸುತ್ತ 10 ಅಡಿ ಉದ್ದ, 2.5 ಅಡಿ ಅಗಲ, 2.5 ಅಡಿ ಆಳದ ಬದುವು ನಿರ್ವಿುಸಿ ಅದರಲ್ಲಿ ಸುಬಾಬುಲ್ ಮೇವು ಬೆಳೆದಿದ್ದಾರೆ.

ಸಾವಯವ ಗೊಬ್ಬರ ಬಳಕೆ

ರೈತ ಗುಡದಪ್ಪ ಅವರು 2 ಹಸು, 2 ಎತ್ತು ಸಾಕಿದ್ದಾರೆ. ಅವುಗಳ ಸಗಣಿಯನ್ನು ಜಮೀನಿನಲ್ಲಿ ಒಂದೆಡೆ ಸಂಗ್ರಹಿಸಿ ಎರೆಹುಳು ಗೊಬ್ಬರ ತಯಾರಿಸಿ ಬೆಳೆಗಳಿಗೆ ಬಳಕೆ ಮಾಡುತ್ತಾರೆ. ಈಗಾಗಲೆ ಮಾವು, ಚಿಕ್ಕು, ಹುಣಸೆ ಮರಗಳು ಫಲ ನೀಡುತ್ತಿದ್ದು, ಈ ವರ್ಷ 70 ರೂಪಾಯಿಗೆ ಕೆಜಿಯಂತೆ 9 ಕ್ವಿಂಟಾಲ್ ಮಾವು ಮಾರಾಟ ಮಾಡಿದ್ದಾರೆ. 100 ರೂಪಾಯಿಗೆ ಕೆಜಿಯಂತೆ 3 ಕ್ವಿಂಟಾಲ್ ಹುಣಸೆ ಮಾರಿದ್ದಾರೆ. 25 ರೂಪಾಯಿಗೆ ಕೆಜಿಯಂತೆ 5 ಕ್ವಿಂಟಾಲ್ ಚಿಕ್ಕು ಮಾರಾಟ ಮಾಡಿದ್ದಾರೆ.

ಪ್ರಶಸ್ತಿಯ ಗರಿ

ರೈತ ಗುಡದಪ್ಪ ಅವರ ವಿಶೇಷ ಕೃಷಿ ಸಾಧನೆ ಗುರುತಿಸಿ 2012ರಲ್ಲಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿದೆ. 2016ರಲ್ಲಿ ಕೃಷಿ ಇಲಾಖೆಯಿಂದ 25 ಸಾವಿರ ರೂಪಾಯಿ ನಗದು ಬಹುಮಾನ ಜತೆಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

ಯಾವುದೆ ನೀರಾವರಿ ಸೌಲಭ್ಯವಿಲ್ಲದೆ ತೋಟಗಾರಿಕೆ, ಅರಣ್ಯ ಕೃಷಿಯಲ್ಲಿ ಸಾಧನೆ ಮಾಡಬೇಕೆನ್ನುವ ಗುರಿ ಹೊಂದಿ ವಿವಿಧ ಬಗೆಯ ಬೆಳೆಗಳನ್ನು ಬೆಳೆದಿದ್ದೇನೆ. ಪ್ರಾರಂಭದಲ್ಲಿ ಕೃಷಿ ಹೊಂಡ ಮತ್ತು ಕೈ ಬೋರ್​ನಿಂದ ನೀರು ಹೊತ್ತು ಬೆಳೆಗಳಿಗೆ ಹಾಕುತ್ತಿದ್ದೆ. ಈಗ ಗಿಡಗಳು ಬೆಳೆದು ನಿಂತು ಆದಾಯ ಕೊಡಲು ಪ್ರಾರಂಭಿಸಿದ್ದು, ಖುಷಿ ತಂದಿದೆ.| ಗುಡದಪ್ಪ ಲಿಂಗಶೆಟ್ಟರ್ಬೂದಿಹಾಳ ರೈತ

ವಿವಿಧ ಬೆಳೆ

ರೈತ ಗುಡದಪ್ಪ ಅವರು 3.13 ಎಕರೆ ಜಮೀನಿನಲ್ಲಿ 22 ಚಿಕ್ಕು, 35 ಮಾವು, 14 ಸೀತಾಫಲ, 3 ನೇರಳೆ, 5 ಪೇರಲ, 3 ದಾಳಿಂಬೆ, 1 ಬಳೂಲ ಗಿಡ, 3 ಕರಿಬೇವು ಗಿಡ, 2 ನುಗ್ಗೆ ಗಿಡ ಬೆಳೆಸಿದ್ದಾರೆ. 120 ಬೇವಿನ ಮರ, 55 ಹುಣಸೇ ಮರ, 10 ತೇಗು, 66 ಅಕೇಶಿಯಾ, 110 ನೀಲಗಿರಿ ಗಿಡ ಬೆಳೆದಿದ್ದು, ಮಳೆಗಾಲದ ಸಂದರ್ಭದಲ್ಲಿ ಹಣ್ಣಿನ ಗಿಡಗಳ ಮಧ್ಯೆ ಹುಳ್ಳಿ, ಸಜ್ಜೆ ಮತ್ತಿತರ ಬೆಳೆ ಬೆಳೆಯುತ್ತಾರೆ.