ಹುಮನಾಬಾದ್: ಮಳೆ ಅಭಾವದಿಂದ ತಾಲೂಕಿನ ರೈತರು ಸಂಕಷ್ಟದಲ್ಲಿದ್ದು ತಕ್ಷಣವೇ ಚಿಟಗುಪ್ಪ ಮತ್ತು ಹುಮನಾಬಾದ್ ತಾಲೂಕು ಬರ ಪೀಡಿತ ಎಂದು ಘೋಷಿಸಿ, ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಮಂಗಳವಾರ ರೈತ ಸಂಘ ಹಾಗೂ ಹಸಿರು ಸೇನೆ ಬಿಜೆಪಿ ರೈತ ಮೋರ್ಚಾ ತಾಲೂಕು ಘಟಕದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಶಿವಚಂದ್ರ ವೃತ್ತದ ಮೂಲಕ ತಹಸೀಲï ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಮಳೆ ಇಲ್ಲದೆ ನೀರಿನ ಸಂಗ್ರಹ ಪ್ರಮಾಣ ಕುಸಿತವಾಗಿ ಬರ ಸೃಷ್ಟಿಯಾಗಿದೆ. ರೈತರ ಪಂಪಸೆಟ್‌ಗಳಿಗೆ ನಿರಂತರ ೧೦ ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು. ಲೋಡ್ ಶೆಡ್ಡಿಂಗ್ ಮಾಡಬಾರದು. ಇದರಿಂದ ರೈತರು ಬೆಳೆ ರಕ್ಷಿಸಲು ಆಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು.
ಬಿಜೆಪಿ ಸರ್ಕಾರ ಜಾರಿಗೆ ತಂದ ರೈತಪರ ಯೋಜನೆಗಳಾದ ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ, ಭೂ ಸಿರಿ, ಶ್ರಮ ಶಕ್ತಿ, ರೈತ ಸಂಪದ ಯೋಜನೆ, ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ, ಜಿಲ್ಲೆಗೊಂದು ಗೋಶಾಲೆ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸೇರಿ ಎಲ್ಲ ಯೋಜನೆ ರದ್ದು ಮಾಡಿ, ಕೃಷಿ ಕ್ಷೇತ್ರ ನಿರ್ಲಕ್ಷಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ೪೨ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಆಸ್ಪದ ಕೊಡಬಾರದು. ರೈತರಿಗೆ ಧೈರ್ಯ ತುಂಬುವ ಯೋಜನೆ ತರಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರಿಗೆ ಸಲ್ಲಿಸಲಾಯಿತು.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲï, ಮಾಜಿ ಶಾಸಕ ಸುಭಾಷ ಕಲ್ಲೂರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಭಿಮನ್ಯು ನಿರಗುಡಿ, ರೈತ ಸಂಘದ ಮುಖಂಡರಾದ ಕರಬಸಪ್ಪ ಮಲಶೆಟ್ಟಿ, ರಾಮರಾವ ಕೇರೂರ, ಗಣಪತರಾವ ಸೇಡೋಳ, ಮುಖಿಮೊದ್ದೀನ್ ಪಟೇಲ್, ಬಸವರಾಜ ಆರ್ಯ, ಪ್ರಭಾಕರ ನಾಗರಾಳೆ, ಕೆ.ಎಂ.ಗಜೇಂದ್ರ, ವಿಶ್ವನಾಥ ಪಾಟೀಲ್, ಗಿರೀಶ ತುಂಬಾ, ರಾಜು ಭಂಡಾರಿ, ಗಿರೀಶ ಪಾಟೀಲ್, ಶಾಂತಪ್ಪ ಪಸಾರಗಿ, ನಾಗಭೂಷಣ ಸಂಗಮ ಇತರರಿದ್ದರು.