ಚಿತ್ರದುರ್ಗ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಹೆಚ್ಚಿನ ಗಮನಹರಿಸ ಬೇಕೆಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಮಾತನಾಡಿ, ಚುನಾವಣೆ ಕೆಲಸವೆಂದು ಕುಡಿಯುವ ನೀರಿನ ಸಮಸ್ಯೆಗಳಿಗೆ ಸ್ಪಂದಿಸದಿರುವುದು ಸರಿಯಲ್ಲ. ಬರ ಪರಿಹಾರಕ್ಕೆ ನೀತಿ ಸಂಹಿತೆ ಅಡ್ಡಿಯಾಗದು ಎಂದು ಹೇಳಿದರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಮಾತನಾಡಿ, ಜಿಲ್ಲೆಯ 47 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 35 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ 364 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಸಾಧ್ಯತೆ ಇದೆ. ಅಂತರ್ಜಲ ಮಟ್ಟವೂ ಕುಸಿದಿದೆ. ಖಾಸಗಿ ಬೋರ್‌ವೆಲ್‌ಗಳನ್ನೂ ಗುರುತಿಸಲಾಗಿದ್ದು, ಈಗಾಗಲೇ ಬೋರ್‌ವೆಲ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಖಾಸಗಿ ಬೋರ್‌ವೆಲ್‌ಗಳಲ್ಲೂ ನೀರು ಕಡಿಮೆಯಾದರೆ ಟ್ಯಾಂಕರ್ ಮೂಲಕ ಪೂರೈಸಲು, ಹೊಸ ಕೊಳವೆಬಾವಿ ಕೊರೆಸಲು ನಿರ್ಧರಿಸಲಾಗಿದೆ. ಪ್ರತಿ ತಾಲೂಕಿಗೆ 25 ಲಕ್ಷ ರೂ. ಬಿಡುಗಡೆ ಆಗಿದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ 2.70 ಕೋಟಿ ರೂ. ಬಿಡುಗಡೆಯಾಗಿದೆ. ಜಿಲ್ಲಾ ಹಾಗೂ ತಾಲೂಕು ಕಚೇರಿಗಳಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಂಎಲ್‌ಸಿ ಕೆ.ಎಸ್.ನವೀನ್ ಮಾತನಾಡಿ, ಜಾತ್ರೆಗಳಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಅಂತಹ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಬೇಕು ಎಂದರು.
ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ, ಜಿಲ್ಲೆಯ 9 ಸಾವಿರ ಜಲಮೂಲ ಸಂಗ್ರಹಾರಗಳಲ್ಲಿರುವ ನೀರನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಸರಣಿ ಸಭೆ ನಡೆಸಲಾಗಿದೆ. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುವಂತಿಲ್ಲ ಎಂದು ತಾಕೀತು ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಸಿಜೇರಿಯನ್ ಹೆರಿಗೆಗೆ ಸಂಖ್ಯೆ ಹೆಚ್ಚಾಗಿದ್ದು, ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚುವಂತೆ ಸಚಿವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಈ ವಿಚಾದಲ್ಲಿ ಚಿತ್ರದುರ್ಗ ರಾಜ್ಯದಲ್ಲೇ 2ನೇ ಸ್ಥಾನದಲ್ಲಿರುವುದು ನಾಚಿಗೇಡಿನ ಸಂಗತಿಯಾಗಿದೆ. ಹಣಕ್ಕಾಗಿ ಸಿಜೇರಿಯನ್‌ಗೆ ವೈದ್ಯರು ಮುಂದಾಗಿದ್ದಾರೆಯೇ ಎಂದು ಪ್ರಶ್ನಿಸಿದರು.
ಜಿಲ್ಲಾಸ್ಪತ್ರೆ ಅವ್ಯವಸ್ಥೆ ಬಗ್ಗೆಯೂ ಬೇಸರಿಸಿದ ಸಚಿವರು, ಲೋಪಗಳಿಗೆ ಸಂಬಂಧಿಸಿದಂತೆ ಯಾರಿಗೆಲ್ಲ ನೋಟಿಸ್ ಕೊಟ್ಟಿದ್ದೀರಿ ಎಂದು ಡಿಎಚ್‌ಒ ಅವರನ್ನು ಪ್ರಶ್ನಿಸಿದರು. ಈವರೆಗೆ ಕರ್ತವ್ಯಲೋಪದಡಿ ನಾಲ್ವರು ವೈದ್ಯಾಧಿಕಾರಿಗಳ ಅಮಾನತಿಗೆ ಶಿಫಾರಸು ಮಾಡಲಾಗಿದೆ ಎಂದು ಎಂದು ತಿಳಿಸಿದ ಡಿಎಚ್‌ಒ, ಗರ್ಭಿಣಿಯರಲ್ಲಿ ಅನೀಮಿಯಾ, ಅಪೌಷ್ಠಿಕತೆ ಹೆಚ್ಚಾಗಿರುವುದು ಸಿಜೇರಿಯನ್‌ಗೆ ಕಾರಣವಾಗಿದೆ ಎಂದರು.
ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿ, ಅಪಘಾತಗಳ ಸಂಖ್ಯೆ ನಿಯಂತ್ರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ಸುರಕ್ಷತಾ ಕ್ರಮಗಳೆಡೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು. ಉಪವಿಭಾಗಾಧಿಕಾರಿ ಎಂ.ಕಾರ್ತೀಕ್ ಮತ್ತಿತರರ ಅಧಿಕಾರಿಗಳಿದ್ದರು.
*ಕೋಟ್
ಕುಡಿಯುವ ನೀರು ಸಮಸ್ಯೆ ನಿವಾರಣೆಗಾಗಿ ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳು ಒಳಗೊಂಡಂತೆ ಜೂನ್‌ವರೆಗೂ ಕ್ರಿಯಾ ಯೋಜನೆ ರೂಪಿಸಬೇಕು. ಈ ಬಾರಿಯ ಬೇಸಿಗೆ ತುಂಬಾ ಗಂಭೀರವಾಗಿದೆ. ಜನ-ಜಾನುವಾರುಗಳಿಗೆ ನೀರು ಕೊಡಲು ಗಮನಹರಿಸಬೇಕು. ಜವಾಬ್ದಾರಿಯುತ ಅಧಿಕಾರಿಯನ್ನು ಗ್ರಾಪಂಗೆ ನಿಯೋಜಿಸಿ, ನೀರಿನ ಸಮಸ್ಯೆ ಬಗೆಹರಿಸಬೇಕು.
ಕೆ.ಎಸ್.ನವೀನ್, ಎಂಎಲ್‌ಸಿ